ಕದೀತಾ ಇದ್ದೀನಿ ಕ್ಷಮಿಸಿ ಬಿಡು- ದೇವಿಗೆ ಪೂಜೆ ಮಾಡಿ ಕಿರೀಟ ಹೊತ್ತೊಯ್ದ ಭಕ್ತ

Public TV
2 Min Read
TEMPLE TJEFT

– ಕಿರೀಟ ಕದೀತಿರೋ ವಿಡಿಯೋ ಫುಲ್ ವೈರಲ್

ಹೈದರಾಬಾದ್: ದೇವಸ್ಥಾನಗಳಲ್ಲಿ ಕದಿಯೋದು ಸಾಮಾನ್ಯ. ಆದರೆ ಇಲ್ಲೊಬ್ಬ ಕಳ್ಳ ಕದಿಯುವ ಮುಂಚೆ ದೇವಿಗೆ ಪೂಜೆ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾನೆ.

ಹೈದಾರಾಬಾದಿನ ಗನ್ ಫಾಂಡ್ರಿಯಲ್ಲಿರುವ ದುರ್ಗಾ ಭವಾನಿ ದೇವಸ್ಥಾನದಲ್ಲಿ ಬುಧವಾರ ಈ ಘಟನೆ ನಡೆದಿದೆ. ಭಕ್ತ ಕಳ್ಳತನ ಮಾಡುವ ಮೊದಲು ದೇವಿಗೆ ಪೂಜೆ ಮಾಡಿ ನಂತರ ಕಿರೀಟ ಕದ್ದಿರುವುದು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತದೆ.

ವಿಡಿಯೋದಲ್ಲೇನಿದೆ?
2 ನಿಮಿಷ 20 ಸೆಕೆಂಡ್ ಇರೋ ಈ ವಿಡಿಯೋದಲ್ಲಿ ಮೊದಲು ಭಕ್ತ ಚಪ್ಪಲಿ ಕಳಚಿಟ್ಟು ದೇವಾಲಯದ ಒಳಗೆ ಪ್ರವೇಶ ಮಾಡುತ್ತಾನೆ. ನಂತರ ಮೊಣಕಾಲೂರಿ ತನ್ನ ಎರಡೂ ಕೈಗಳನ್ನು ಜೋಡಿಸಿ ದೇವಿಗೆ ನಮಸ್ಕರಿಸಿ, 5-6 ಒಂದು ಸುತ್ತು ತಿರುಗುತ್ತಾನೆ. ಆ ಬಳಿಕ ತಲೆಬಗ್ಗಿಸಿ ಬೇಡಿಕೊಂಡು ದೇವಿಯ ಪಾದ ಮುಟ್ಟಿ ನಮಸ್ಕರಿಸುತ್ತಾನೆ. ಅಲ್ಲದೆ ದೇವಿಯ ಎದುರೇ ಬಸ್ಕಿ ಹೊಡೆಯುತ್ತಾನೆ.

ಆ ಬಳಿಕ ಮೂರ್ತಿಯ ಎದುರಿದ್ದ ಕುಂಕುಮ ಹಣೆಗಿಟ್ಟು ಹಾಗೆಯೇ ಸುತ್ತು ಬರುತ್ತಾ ಅಕ್ಕ-ಪಕ್ಕ, ಹೊರಗಡೆ ಯಾರಾದರೂ ಇದ್ದಾರೆಯಾ ಎಂಬುದನ್ನು ಚೆಕ್ ಮಾಡುತ್ತಾನೆ. ಯಾರೂ ಇಲ್ಲದಿರುವುದನ್ನು ಮನಗಂಡ ಭಕ್ತ, ನೇರವಾಗಿ ದೇವಿಯ ಕಿರೀಟಕ್ಕೆ ಕೈ ಹಾಕುತ್ತಾನೆ. ಆದರೆ ಹಗ್ಗದಿಂದ ಕಟ್ಟಿರುವುದರಿಂದ ಅದನ್ನು ತೆಗೆಯಲು ಅಷ್ಟು ಸುಲಭವಾಗಲಿಲ್ಲ. ಹೀಗಾಗಿ ಮತ್ತೆ ಹೊರಗಡೆ ನೋಡುತ್ತಾನೆ.

ಹೀಗೆ ನೋಡುತ್ತಾ ದೇವಿಯ ಬಳಿ ಮತ್ತೆ ಪ್ರಾರ್ಥನೆ ಮಾಡಿದಂತೆ ನಟಿಸಿ ಬಳಿಕ ಕಿರೀಟ ಬಿಚ್ಚಲು ಪ್ರಯತ್ನಿಸುತ್ತಾನೆ. ದೇವಿಯ ತಲೆಯಿಂದ ಕಿರೀಟ ತೆಗೆದರೂ ಹಗ್ಗದಿಂದ ಅದನ್ನು ಬಿಚ್ಚಲು ಸಮಯ ತೆಗೆದುಕೊಳ್ಳುತ್ತಾನೆ. ಕೊನೆಗೆ ಹೇಗೋ ಹಗ್ಗದಿಂದ ಕಿರೀಟವನ್ನು ಬೇರ್ಪಡಿಸಿ ತನ್ನ ಶರ್ಟಿನೊಳಗೆ ಬಚ್ಚಿಟ್ಟುಕೊಂಡು ಅಲ್ಲಿಂದ ಎಸ್ಕೇಪ್ ಆಗುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸದ್ಯ ಈ ವಿಡಿಯೋವನ್ನು ಸಾಕಷ್ಟು ಮಂದಿ ನೋಡಿದ್ದು, ಹಲವಾರು ಕಮೆಂಟ್ ಗಳು ಬಂದಿವೆ. ಕೆಲವರು ಕಳ್ಳ ಭಕ್ತಿ ಎಂದು ಹೇಳಿದರೆ, ಇನ್ನೊಬ್ಬರು ಒಳ್ಳೆಯದು, ಕೆಲವರು ಕದ್ದು ಪ್ರಾರ್ಥಿಸಿದರೆ, ಈತ ಪ್ರಾರ್ಥಿಸಿ ಕದಿಯುತ್ತಾನೆ ಎಂದು ಬರೆದುಕೊಂಡು ಕಣ್ಣು ಹೊಡೆಯುವ ಎಮೋಜಿ ಹಾಕಿದ್ದಾರೆ. ಮತ್ತೊಬ್ಬರು ಇದು ಒಂಥರಾ ಟಾಲಿವುಡ್ ಸಿನಿಮಾದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಹೀಗೆ ಹಲವಾರು ಕಾಮಿಡಿ ಪ್ರತಿಕ್ರಿಯೆಗಳು ಬಂದಿವೆ.

Share This Article
Leave a Comment

Leave a Reply

Your email address will not be published. Required fields are marked *