ನವದೆಹಲಿ: ತುಂಬಾ ಜನರು ಅವಸರದಲ್ಲಿ ರೈಲ್ವೇ ಟ್ರ್ಯಾಕ್ ದಾಟಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ 21 ವರ್ಷದ ಯುವಕನೊಬ್ಬ ದೆಹಲಿಯ ಮೆಟ್ರೋ ಟ್ರ್ಯಾಕ್ ದಾಟುತ್ತಿದ್ದಾಗ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ.
ದೆಹಲಿಯ ಶಾಸ್ತ್ರೀ ನಗರದಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ಸಂಭವಿಸಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳಿ ದಾಟಿದ ಯುವಕ ಮಯೂರ್ ಪಟೇಲ್ ಎಂದು ತಿಳಿದು ಬಂದಿದೆ. ಪಟೇಲ್ ಮೆಟ್ರೋ ನಿಲ್ದಾಣದಲ್ಲಿ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಲು ಬ್ರಿಡ್ಜ್ ಬದಲು ಮೆಟ್ರೋ ಟ್ರ್ಯಾಕ್ ಹಾದು ಹೋಗಲು ಮುಂದಾಗಿದ್ದಾನೆ.
Advertisement
ಇದೇ ವೇಳೆ ಹೊರಡಲು ಸಿದ್ಧವಾಗಿ ಟ್ರ್ಯಾಕ್ ಮೇಲೆ ರೈಲು ನಿಂತಿದೆ. ಆದರೆ ಪಟೇಲ್ ನಿಲುಗಡೆ ಮಾಡಿದ ರೈಲಿನ ಬಗ್ಗೆ ಹೆಚ್ಚು ಗಮನ ಕೊಡದೇ ಒಂದು ಟ್ರ್ಯಾಕ್ ದಾಟಿ ಇನ್ನೊಂದು ಟ್ರ್ಯಾಕ್ ದಾಟಿ ಮೇಲೆ ಹತ್ತಲು ಯತ್ನಿಸಿದ್ದಾನೆ. ಆಗ ನಿಧಾನವಾಗಿ ರೈಲು ಚಲಿಸಿದೆ. ಆದರೆ ಪಟೇಲ್ ಕೈ ಜಾರಿ ಆಕಸ್ಮಿಕವಾಗಿ ಕೆಳಗೆ ಜಾರಿದ್ದಾನೆ. ಸದ್ಯ ಈ ವೇಳೆ ಅದೃಷ್ಟವಶಾತ್ ರೈಲು ನಿಂತಿದೆ. ತಕ್ಷಣ ಆತ ಮುಂದೆ ನಡೆದುಕೊಂಡು ಹೋಗಿ ಮೇಲೆ ಹತ್ತಿದ್ದಾನೆ.
Advertisement
ಪಟೇಲ್ ಮಾಡಿದ್ದು ಅಪರಾಧವಾಗಿದ್ದು, ಆತನನ್ನು ಬಂಧಿಸಿ ದಂಡ ವಿಧಿಸಲಾಗಿದೆ. ತದನಂತರ ವಿಚಾರಣೆ ನಡೆಸಿದಾಗ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗುವ ಮಾರ್ಗ ತಿಳಿದಿಲ್ಲದ ಕಾರಣ ಈ ರೀತಿಯಾಗಿ ಮಾಡಿರುವುದಾಗಿ ತಿಳಿಸಿದ್ದಾನೆ.
Advertisement
ಅನುಮತಿ ಇಲ್ಲದಿದ್ದರೂ ಟ್ರ್ಯಾಕ್ ಹಾದು ಹೋಗಲು ಯತ್ನಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಆರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವಾ 500 ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ.