ಉಡುಪಿ: ಆಹಾರವನ್ನ ಅರಸಿಕೊಂಡು ಕಾಡಿನಿಂದ ಅಲೆವೂರು ಗ್ರಾಪಂ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಆಹಾರಕ್ಕಾಗಿ ನಾಯಿಯನ್ನು ಬೆನ್ನತ್ತಿ ಬಂದ ಚಿರತೆ ಬಾತ್ ರೂಮಿನಲ್ಲಿ ಅವಿತುಕೊಂಡು ಕುಳಿತ್ತಿತ್ತು. ಇಂದು ಮುಂಜಾನೆ ಮನೆಯವರು ಬಾತ್‍ರೂಮಿಗೆ ತೆರಳಿದಾಗ ಚಿರತೆ ಅವಿತು ಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಯವರು ಬಾತ್ ರೂಮಿನ ಬಾಗಿಲನ್ನು ಭದ್ರಗೊಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಈ ವಿಚಾರವನ್ನು ಮುಟ್ಟಿಸಿದ್ದರು.
ವಿಚಾರ ತಿಳಿದು ಕುಂದಾಪುರ ವಿಭಾಗದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾತ್ ರೂಮಿನ ಬಾಗಿಲಿನ ಹೊರಗಡೆ ಬೋನನ್ನು ಫಿಕ್ಸ್ ಮಾಡಿದ್ದರು. ಬಾಗಿಲಿನ ಎತ್ತರದಷ್ಟು ಕಬ್ಬಿಣದ ಶಟರ್ ಫಿಕ್ಸ್ ಮಾಡಿದ್ದು, ಬಾತರೂಮಿನ ಬಾಗಿಲು ತೆಗೆಯುತ್ತಿದ್ದಂತೆ ಚಿರತೆ ಓಡಿ ಬಂದು ಬೋನಿನೊಳಗೆ ಬಿದ್ದಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಬಾಗಿಲು ಬಂದ್ ಮಾಡಿದ್ದಾರೆ. ಈ ಚಿರತೆಯನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಹೋಗಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಬಾರಿ ಚಿರತೆ ಕಂಡುಬಂದಿತ್ತು. ಸಂಜೆಯಾಗುತ್ತಿದ್ದಂತೆ ಸ್ಥಳೀಯರು ಓಡಾಡಲು ಕೂಡ ಆತಂಕ ಪಡುತ್ತಿದ್ದರು. ಈ ಚಿರತೆ ಬಂಧನದ ಮೂಲಕ ಅಲೆವೂರು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.