ಓಬ್ನಿಸ್: ಫೇಸ್‍ಬುಕ್‍ನಲ್ಲಿ ಲೈವ್ ವಿಡಿಯೋ ಮಾಡುತ್ತಿದ್ದ ಇಬ್ಬರು ಯುವತಿಯರ ಕಾರ್ ಅಪಘಾತಕ್ಕೀಡಾಗಿ ಓರ್ವ ಯುವತಿ ಸಾವನ್ನಪ್ಪಿದ್ದು, ಅವರ ಕೊನೆ ಕ್ಷಣದ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ.
ಜೆಕ್ ರಿಪಬ್ಲಿಕ್‍ನ ಓಬ್ನಿಸ್ ನಗರದಲ್ಲಿ ನಿಕೋಲ್ ಬಾರಬಸೊವಾ ಎಂಬ ಯುವತಿ ಕಾರಿನಲ್ಲಿ ಹೋಗುವಾಗ ವಿಡಿಯೋ ಮಾಡುತ್ತಾ ತಮಾಷೆ ಮಾಡಿದ್ದಾಳೆ. ಈ ವೇಳೆ ಕಾರ್ ಚಾಲನೆ ಮಾಡುತ್ತಿದ್ದ ಆಕೆಯ ಗೆಳತಿ ಕೂಡ ಅವಳೊಂದಿಗೆ ಖುಷಿಯಾಗಿಯೇ ಪೋಸ್ ಕೊಟ್ಟಿದ್ದಾಳೆ. ಲೈವ್ ವಿಡಿಯೋ ಮಾಡುತ್ತಿದ್ದಾಗಲೇ ಕಾರ್ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.
ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸುತ್ತಲೇ ಸಾವಿನ ಮನೆ ಸೇರಿದ್ರು- ವೈರಲಾಯ್ತು ಯುವಕರ ಕೊನೇ ಕ್ಷಣದ ವಿಡಿಯೋ
ಅಪಘಾತಕ್ಕೀಡಾದ ವೋಕ್ಸ್ ವೇಗನ್ ಕಾರ್ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. ವಿಡಿಯೋ ಮಾಡುತ್ತಿದ್ದ ಯುವತಿ ಒಮ್ಮೆ ಗಾಬರಿಯಿಂದ ರಸ್ತೆಯ ಕಡೆ ನೋಡಿ ಮತ್ತೆ ಕ್ಯಾಮೆರಾ ಕಡೆಗೆ ನೋಡಿದ್ದಾಳೆ. ನಂತರ ಕಾರ್ ಉರುಳಿ ಬಿದ್ದಿದ್ದು ಆಕೆಯ ಮೊಬೈಲ್ ಕಾರಿನಲ್ಲಿ ಎಲ್ಲೋ ಒಂದು ಕಡೆ ಬಿದ್ದು ವಿಡಿಯೋದಲ್ಲಿ ಸೀಟ್ ಬೆಲ್ಟ್ ಮಾತ್ರ ಕಾಣುತ್ತದೆ. 20 ನಿಮಿಷಗಳ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಲೈವ್ ವಿಡಿಯೋವನ್ನ ಅಂತ್ಯಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ನಿಕೋಲ್ ಸಾವನ್ನಪ್ಪಿದ್ದು, ಕಾರಿನ ಚಾಲಕಿಯ ತಲೆಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಈ ಬಗ್ಗೆ ವಿಚಾರಣೆಯನ್ನು ನಡೆಸುತ್ತಿದ್ದಾರೆ.