– ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ವೈದ್ಯ
ಮುಂಬೈ: ನರಶಸ್ತ್ರಚಿಕಿತ್ಸಕರು ಡ್ಯೂಟಿಯಲ್ಲಿಲ್ಲದ ಕಾರಣ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ರೋಗಿಯ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ನಡೆದಿದೆ.
Advertisement
ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂಳೆ ತಜ್ಞರಾದ ಡಾ.ರೋಹನ್ ಮಾಮುಂಕರ್ ಮೇಲೆ ಭಾನುವಾರದಂದು ಹಲ್ಲೆ ನಡೆದಿದೆ.
Advertisement
ನಡೆದಿದ್ದೇನು?: ಭಾನುವಾರ ರಾತ್ರಿ ತಲೆಗೆ ತೀವ್ರ ಗಾಯವಾಗಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದ್ರೆ ನರಶಸ್ತ್ರಚಿಕಿತ್ಸಕರು ಆಸ್ಪತ್ರೆಯಲ್ಲಿ ಇಲ್ಲದ ಕಾರಣ ರೋಗಿಯನ್ನು ಬೇರೊಂದು ಅಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ವೈದ್ಯ ರೋಹನ್ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದು ರೋಗಿಯ ಸಂಬಂಧಿಕರಾದ ಸುಮಾರು 20 ಮಂದಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ರೋಹನ್ ಅವರ ಮೇಲೆ ರಾಡ್ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ರೋಹನ್ ಅವರ ತಲೆ ಹಾಗೂ ಎದೆಯ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿವೆ. ವೈದ್ಯರ ಕಣ್ಣಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ವೈದ್ಯ ರೋಹನ್ ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಇದೀಗ ಮಹಾರಾಷ್ಟ್ರ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್, ವೈದ್ಯ ರೋಹನ್ ಮೇಲಿನ ಹಲ್ಲೆ ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದು, ಮೊಂಬತ್ತಿ ಹಿಡಿದು ಮೆರವಣಿಗೆ ಮಾಡಲು ನಿರ್ಧರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.