Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು

Public TV
2 Min Read
Watch Cyclone Fengals 50 cm rainfall washes away cars vans in Krishnagiri

ಚೆನ್ನೈ: ಫೆಂಗಲ್ ತೂಫಾನ್ (Fengal Cyclone) ತಮಿಳುನಾಡು-ಪುದುಚ್ಚೆರಿಯಲ್ಲಿ (Tamilnadu Puducherry) ಜಲ ಪ್ರಳಯವನ್ನೇ ಸೃಷ್ಟಿಸಿದೆ. ಶನಿವಾರ ಅರ್ಧರಾತ್ರಿಯೇ ಪುದುಚ್ಚೇರಿ ಸಮೀಪ ತೀರ ದಾಟಿದ ಫೆಂಗಲ್, ಹವಾಮಾನ ಇಲಾಖೆಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿತು.

ಭಾನುವಾರ ಮಧ್ಯಾಹ್ನದವರೆಗೂ ಅಂದರೆ ಬರೋಬ್ಬರಿ 17 ಗಂಟೆ ಸಮಯ ಅಲ್ಲೇ ಕೇಂದ್ರೀಕೃತವಾದ ಫೆಂಗಲ್‌ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಗಂಟೆಗೆ 90 ಕಿಮೀ ವೇಗದಲ್ಲಿ ಬೀಸಿದ ರಣಗಾಳಿಗೆ ಮಳೆ ಜೊತೆಯಾದ ಪರಿಣಾಮ ಪುದುಚ್ಚೆರಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕರ್ನಾಟಕ, ಕೇರಳದತ್ತ ಫೆಂಗಾಲ್ ಸೈಕ್ಲೋನ್- ಕೊಡಗಿಗೆ ರೆಡ್‌, ಯಾವ ಜಿಲ್ಲೆಗಳಿಗೆ ಯಾವ ಅಲರ್ಟ್‌?

 

510 ಮಿಲಿಮೀಟರ್ ಮಳೆಗೆ ರಸ್ತೆಗಳು, ಕಾಲನಿಗಳು ಜಲಾವೃತವಾಗಿವೆ. ವಾಹನಗಳು ಮುಳುಗಡೆ ಆಗಿವೆ. ರಕ್ಷಣಾ ಪಡೆಗಳು ಸಂತ್ರಸ್ತರ ರಕ್ಷಣೆ ಮಾಡಿವೆ. ನೆರೆಯ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿಯೇ ಕಂಡುಕೇಳರಿಯದ ರೀತಿಯಲ್ಲಿ ದಾಖಲೆಯ ಮಳೆಯಾಗಿದೆ. ಇದನ್ನೂ ಓದಿ: ರಾಜ್ಯದ 4 ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ

ಚೆನ್ನೈ, ತಿರುವಣ್ಣಮಲೈ, ಕೃಷ್ಣಗಿರಿ, ಕಲ್ಲಕುರಿಚ್ಚಿ, ವಿಲ್ಲುಪ್ಪುರಂ, ಕಡಲೂರು, ಕಾಂಚಿಪುರಂ, ವೆಲ್ಲೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುವಣ್ಣಾಮಲೈನಲ್ಲಿ ಗುಡ್ಡ ಕುಸಿದು ಏಳು ಮಂದಿ ಕಣ್ಮರೆಯಾಗಿದ್ದಾರೆ. ಅವರ ಪತ್ತೆಗೆ ಕಳೆದ ರಾತ್ರಿಯಿಂದ ನಿರಂತರ ಕಾರ್ಯಚರಣೆ ನಡೆದಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ.

ಸದ್ಯ ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿರುವ ಫೆಂಗಲ್ ತುಂಬಾ ನಿಧಾನವಾಗಿ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿದೆ. ಇಂದು ಮಧ್ಯರಾತ್ರಿಯವರೆಗೂ ಪುದುಚ್ಚೆರಿ, ಉತ್ತರ ತಮಿಳುನಾಡಿನಲ್ಲೇ ಕೇಂದ್ರೀಕೃತವಾಗಿ ಇರಲಿದೆ. ಮಳೆ ಸಂಬಂಧಿ ಅವಘಡಗಳಿಂದ ತಮಿಳುನಾಡು-ಪುದುಚ್ಚೆರಿಯಲ್ಲಿ ಈವರೆಗೂ ಕನಿಷ್ಠ 11 ಮಂದಿ ಬಲಿ ಆಗಿದ್ದಾರೆ.

ಎಲ್ಲೆಲ್ಲಿ ಏನಾಗಿದೆ?
ಪುದುಚ್ಚೆರಿ ಜಲಮಯವಾಗಿದ್ದು ಮನೆಗಳ ಬಳಿ ಪ್ರವಾಹದಂತೆ ನೀರು ಹರಿಯುತ್ತಿದೆ. ತಿರುವಣ್ಣಾಮಲೈಯಲ್ಲಿ ಮನೆಗಳ ಮೇಲೆ ಬಂಡೆ ಉರುಳಿದರೆ ದೇವಸ್ಥಾನದ ಗೋಡೆಗಳು ಕುಸಿದಿವೆ. ಎರ್ಕಾಡ್ ಮುಖ್ಯರಸ್ತೆಯಲ್ಲಿ ಭೂಕುಸಿತವಾಗಿದೆ.

ಕೃಷ್ಣಗಿರಿಯಲ್ಲಿ ಕೆರೆ ಕೋಡಿ ಒಡೆದು ಮನೆಗಳು ಜಲಾವೃತವಾಗಿದ್ದು ನಿಂತಿದ್ದ ವಾಹನಗಳು ನೀರುಪಾಲಾಗಿವೆ. ಪೊಲೀಸ್‌ ಠಾಣೆಯ ಮುಳುಗಿದೆ.

ವಿಳ್ಳುಪುರಂ-ವೇಲೂರು ಹೆದ್ದಾರಿ ಮುಳುಗಡೆಯಾಗಿದೆ. ಬೋಟ್ ಮೂಲಕ ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ.

 

Share This Article