ವಾಷಿಂಗ್ಟನ್: ಪಾರ್ಕಿಂಗ್ ಗ್ಯಾರೇಜ್‍ನಿಂದ ಕಾರ್‍ವೊಂದು 7 ಮಹಡಿ ಕೆಳಗೆ ಬಿದ್ದು ಮತ್ತೊಂದು ವಾಹನಕ್ಕೆ ಗುದ್ದಿ ತಲೆಕೆಳಗಾಗಿ ಬೀಳೋ ಭಯಾನಕ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಕಾರ್ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೊದಲಿಗೆ ಕಟ್ಟಡವೊಂದರ ಬಳಿ ಎಸ್‍ಯುವಿ ಕಾರ್‍ವೊಂದು ಬಂದು ಪಾರ್ಕ್ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಕಾರ್ ಇನ್ನೇನು ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಬಿಎಂಡಬ್ಲ್ಯೂ ಕಾರ್ ಏಳು ಮಹಡಿಗಳಿಂದ ಕೆಳಗೆ ಬಿದ್ದಿದೆ. ಬಿಎಂಡಬ್ಲ್ಯೂ ಕೆಳಗೆ ಬಿದ್ದ ರಭಸಕ್ಕೆ ಎಸ್‍ಯುವಿ ಕಾರ್‍ಗೆ ಗುದ್ದಿದ್ದು ಅದು ಮುಂದಕ್ಕೆ ಹೋಗಿದೆ. ಕೆಳಗೆ ಬಿದ್ದ ಬಿಎಂಡಬ್ಲ್ಯೂ ಕಾರ್ ತಲೆಕೆಳಗಾಗಿ ಬಿದ್ದಿದ್ದರಿಂದ ಚಾಲಕಿ ಒಳಗೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದವರು ಓಡಿಬಂದು ಒಳಗೆ ಸಿಲುಕಿದ್ದ ಚಾಲಕಿಯನ್ನು ಹೊರಗೆ ತರಲು ಸಹಾಯ ಮಾಡಿದ್ದಾರೆ.
ವರದಿಯ ಪ್ರಕಾರ ಬಿಎಂಡಬ್ಲ್ಯೂ ಚಾಲನೆ ಮಾಡುತ್ತಿದ್ದ ಚಾಲಕಿ ಬ್ರೇಕ್ ಪೆಡಲ್ ಬದಲು ಆಕ್ಸಲೇಟರ್ ಮೇಲೆ ಕಾಲಿಟ್ಟಿದಿಂದ ಪಾರ್ಕಿಂಗ್ ಗ್ಯಾರೇಜ್‍ನ ಬ್ಯಾರಿಯರ್‍ಗೆ ಗುದ್ದಿ ಕಾರ್ ಕೆಳಗೆ ಬಿದ್ದಿದೆ. ಘಟನೆಯ ನಂತರ ಚಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವರದಿಯಾಗಿದೆ.
ಈ ಘಟನೆ ಜುಲೈ 13ರಂದು ನಡೆದಿದೆ. ಆದರೆ ಆಸ್ಟಿನ್ ಪೊಲೀಸ್ ಇಲಾಖೆ ಕಳೆದ ಗುರುವಾರದಂದು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನ ಬಿಡುಗಡೆ ಮಾಡಿದೆ.