ಬೆಂಗಳೂರು: `ನೀವು ಏನೇ ಹೇಳ್ರಿ.. ಹಾಲಿವುಡ್ ರೇಂಜ್‍ಗೆ ನಮ್ ಇಂಡಿಯನ್ ಸಿನಿಮಾ ಕಾಂಪಿಟ್ ಮಾಡೋಕೆ ಸಾಧ್ಯಾನೇ ಇಲ್ಲ….’ ಹೀಗಂತ ಹೇಳುವ ಕಾಲ ಕೆಲವು ವರ್ಷಗಳ ಹಿಂದೆ ಇತ್ತು. ಆದರೆ ಕಳೆದ ಒಂದು ದಶಕದಿಂದ ದಕ್ಷಿಣ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳನ್ನು ನೋಡುತ್ತಿದ್ದರೆ ಹಾಲಿವುಡ್‍ಗೆ ಹಾಲಿವುಡ್ಡೇ ಬೆಚ್ಚಿ ಬಿದ್ದಿದೆ. ಅದಕ್ಕೆ 2.0 ಸಿನಿಮಾ ಮೇಕಿಂಗ್ ಸಾಕ್ಷಿ. ಶಂಕರ್ ನಿರ್ದೇಶನದ 2.0 ಹೇಗಿದೆ ಅಂತ ನೋಡಿದ್ರೆ ನೀವು ಕುಂತಲ್ಲೇ ಕಳೆದು ಹೋಗ್ತೀರಿ.
ಹೌದು. ಯಪ್ಪಾ ಯಪ್ಪಾ ಯಪ್ಪಾ….ಇದೇನ್ರಿ ಇದು. ಇವರೆಲ್ಲಾ ಸೇರಿಕೊಂಡು ಸಿನಿಮಾ ಮಾಡ್ತಾ ಇದ್ದಾರಾ ಇಲ್ಲ ಹೊಸ ಜಗತ್ತನ್ನೇ ಸೃಷ್ಟಿ ಮಾಡುತ್ತಿದ್ದಾರಾ? ಅದೆಷ್ಟು ಜನ, ಅದೆಷ್ಟು ಕ್ಯಾಮೆರಾಗಳು, ಅದೇನು ಪ್ರತಿ ಶಾಟ್‍ಗೂ ತಯಾರಿ, ಮೇಕಪ್ ಮಾಡಿಕೊಳ್ಳುವ ಸ್ಟೈಲು, ರಜನಿ ಅಂಡ್ ಅಕ್ಷಯ್ ಮುಖಕ್ಕೆ ಮಾಸ್ಟ್ ಪ್ಯಾಚ್ ಹಾಕುವ ರೀತಿ. ಸಾವಿರಾರು ಜನರು ಓಡಾಟ..ಉಫ್…ನಿಜಕ್ಕೂ ಶಂಕರ್ ಭಾರತೀಯ ಚಿತ್ರರಂಗದ ಅದ್ಭುತ ನಿರ್ದೇಶಕ ಎನ್ನುವುದಲ್ಲಿ ನೋ ಡೌಟ್. ಅದಕ್ಕೆ ಅವರು ಬಿಟ್ಟಿರುವ ರೊಬೊ ಚಿತ್ರದ ಎರಡನೇ ಭಾಗ 2.0 ಸಿನಿಮಾದ ಮೇಕಿಂಗ್ ಕಣ್ಣ ಮುಂದಿನ ಸಾಕ್ಷಿ.
Advertisement
ರೊಬೊ…ಸುಮಾರು ಎಂಟು ವರ್ಷಗಳ ಹಿಂದೆ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಅದು ಕೋಟಿ ಕೋಟಿ ಹಣವನ್ನು ಲೂಟಿ ಮಾಡಿತ್ತು. ಅದಕ್ಕೂ ನೂರಾರು ಕೋಟಿಯನ್ನು ಸುರಿದಿದ್ದರು. ಸುಮಾರು ಎರಡು ವರ್ಷಗಳ ಚಿತ್ರೀಕರಣದ ನಂತರ ತೆರೆ ಕಂಡಿದ್ದ ಅದು ರಜನಿ ವೃತ್ತಿ ಬದುಕಿಗೆ ಹೊಸ ಇಮೇಜ್ ನೀಡಿದ್ದು ಸುಳ್ಳಲ್ಲ. ಹಾಗೆಯೇ ಭಾರತೀಯ ಚಿತ್ರರಂಗದಲ್ಲೂ ಹಾಲಿವುಡ್ ಲೆವೆಲ್‍ನ ಸಿನಿಮಾ ಮಾಡುವ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ಇದ್ದಾರೆಂದು ಎದೆ ತಟ್ಟಿಕೊಂಡು ಹೇಳಿತ್ತು.
Advertisement
ರೊಬೊ ಚಿತ್ರಕ್ಕೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಅದಕ್ಕೆ ಏನೇನು ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಹೀಗಾಗಿ ಜನರೂ ಅದಕ್ಕೆ ತಕ್ಕಂತೆ ಕೈ ಹಿಡಿದರು. ಅದಾದ ಮೇಲೆ ಶಂಕರ್ ಒಂದು ರಿಮೇಕ್ ಸಿನಿಮಾ ಮಾಡಿದರು. ವಿಕ್ರಮ್ ಆಭಿನಯದ ಐ ಸಿನಿಮಾ ಕೂಡ ಬಂತು. ಅದರೆ ಅದೇಕೊ ಏನೊ ಜನರು ಅದನ್ನು ಮೆಚ್ಚಲಿಲ್ಲ. ಕೊನೆಗೆ ರೊಬೊ ಸಿನಿಮಾದ ಎರಡನೇ ಭಾಗವನ್ನು ಮಾಡಲು ನಿರ್ಧರಿಸಿದರು. ರಜನಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟರು. ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಇದು ಈಗಲೂ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಆ ಸಿನಿಮಾದ ಮೇಕಿಂಗ್ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು ನೋಡಿ, ಬಿಡುಗಡೆಯಾಗಿದ್ದೇ ತಡ ಯೂಟ್ಯೂಬ್‍ನಲ್ಲಿ ದೇಶದಲ್ಲೇ ನಂಬರ್ ಟ್ರೆಂಡಿಂಗ್ ಆಗಿದ್ದು, ಒಂದೇ ದಿನದಲ್ಲಿ 36 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ.
Advertisement
ಮೈಲುದ್ದದ ರೋಡುಗಳು, ಸುತ್ತ ಮುತ್ತ ಮನೆಗಳು, ಸೆಟ್ ರೆಡಿ ಮಾಡುತ್ತಿರುವ ಕಾರ್ಮಿಕರು, ಸಾವಿರಾರು ಜನರು ಮೈದಾನದಿಂದ ಓಡಿ ಹೋಗುತ್ತಿರುವುದು, ಮಲಗಿಕೊಂಡ ರಜನಿ ಒಂದು ಸೈಡ್ ಲುಕ್ ಕೊಡುವ ಸ್ಟೈಲು, ಕಾರುಗಳು ಆಕಾಶಕ್ಕೆ ಹಾರಿ ಬೆಂಕಿ ಹತ್ತಿ ಉರಿಯುವುದು, ರೊಬೊ ಡ್ರೆಸ್‍ನಲ್ಲಿ ರಜನಿ ಶಾಟ್‍ಗೆ ರೆಡಿ ಆಗುತ್ತಿರುವುದು, ರಜನಿ ಮತ್ತು ಅಕ್ಷಯ್ ಮುಖಕ್ಕೆ ವ್ಯಾಕ್ಸ್ ಹಾಕಿ, ಅದು ಒಣಗಿದ ನಂತರ ಅದೇ ರೂಪದ ನಕಲಿ ಮುಖವಾಡ ಮಾಡುವ ದೃಶ್ಯ, ಹುಲಿಯಂಥ ಹುಬ್ಬು, ಕೋರೆ ಹಲ್ಲು, ಇಷ್ಟಗಲ ಕೆಂಪು ಕೆಂಪು ಕಣ್ಣಿನ ಅಕ್ಷಯ್…ಓಹೊಹೊಹೊ…ಇದನ್ನು ನೋಡುತ್ತಿದ್ದರೆ ಒಬ್ಬ ನಿರ್ದೇಶಕನ ಶ್ರಮ ಏನೆಂದು ಗೊತ್ತಾಗುತ್ತದೆ.
Advertisement
ಸಿನಿಮಾ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುವ ಮಾತಿದೆ. ಅದು ನೂರಕ್ಕೆ ನೂರು ನಿಜ. ಫುಟ್‍ಪಾತ್‍ನಲ್ಲಿ ಇದ್ದವನು ಒಂದೇ ರಾತ್ರಿಯಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ, ಕೋಟಿ ಕೋಟಿ ಗಳಿಸಿದ ನಿರ್ಮಾಪಕ ಕಣ್ಣು ಮುಚ್ಚಿ ತೆರೆವಷ್ಟರಲ್ಲಿ ಬೀದಿಗೆ ಬಂದಿರುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಎಲ್ಲಾ ಚಿತ್ರರಂಗದಲ್ಲಿ ಇಂಥ ಸಾವಿರಾರು ಘಟನೆಗಳು ನಡೆದಿವೆ. ಮುಂದೆಯೂ ನಡೆಯುತ್ತವೆ. ಕೆಲವರು ದುಡ್ಡು, ಹೆಸರು ಮಾಡಲು ಬರುತ್ತಾರೆ, ಇನ್ನು ಕೆಲವರು ಶೋಕಿಗಾಗಿ ಬಾಗಿಲು ತಟ್ಟುತ್ತಾರೆ, ಆದರೆ ಅದೊಂದು ವರ್ಗ ಇದೆ. ಅವರು ಸಿನಿಮಾ ಅನ್ನೋದನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಆ ಸಾಲಿನಲ್ಲಿ ಶಂಕರ್ ಹೆಸರನ್ನು ಅನಿವಾರ್ಯವಾಗಿ ಸೇರಿಸಲೇಬೇಕು.
ಕೆಲವು ತಿಂಗಳ ಹಿಂದೆ ಇದೇ 2.0 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಮುಂಬೈನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಹಲವರು ಗಣ್ಯರು ಹಾಜರಿದ್ದರು. ಆ ಎರಡು ಮೂರು ಪೋಸ್ಟರ್‍ಗಳಿಂದಲೇ ಶಂಕರ್ ಸಿನಿಮಾದ ಬಗ್ಗೆ ಸಿಕ್ಕಾ ಪಟ್ಟೆ ಕುತೂಹಲ ಮೂಡಿಸಿದ್ದರು. ಅದಕ್ಕೆ ಸಾವಿರ ಪಟ್ಟು ಸೇರಿಸಿ ಈ ಮೇಕಿಂಗ್ ಬಿಟ್ಟಿದ್ದಾರೆ ನೋಡಿ. ಕೇವಲ ಒಂದು ದಿನದಲ್ಲಿ 25 ಲಕ್ಷ ಜನರು ನೋಡಿ ಕೇಕೆ ಹಾಕಿದ್ದಾರೆ. ತಲೈವಾ ಲುಕ್ಕಿಗೆ, ಅಕ್ಷಯ್ ವಿಲನ್ ಕಿಕ್‍ಗೆ ಫಿದಾ ಆಗಿದ್ದಾರೆ. 67ರ ಹರೆಯದಲ್ಲೂ ರಜನಿ 25ರಹುಡುಗನಂತೆ ಶ್ರದ್ಧೆಯಿಂದ ಅಭಿನಯಿಸಿದ್ದನ್ನು ನೋಡಿ ಶರಣು ಶರಣೆಂದಿದ್ದಾರೆ.
ಅಂದ ಹಾಗೆ ಇದರ ಇನ್ನೊಂದು ಸ್ಪೆಸಾಲಿಟಿಯನ್ನು ನಾವು ಹೇಳಲೇಬೇಕು. ಅದು ಮೇಕ್ ಇನ್ ಇಂಡಿಯಾ ಅಭಿಯಾನ ಕಮ್ ಅಭಿಮಾನ. ಆಗಿನ್ನೂ ಈ ಸಿನಿಮಾ ಅರಂಭವಾಗಿರಲಿಲ್ಲ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿತ್ತು. ಮೋದಿ ಪ್ರಧಾನಿಯಾಗಿದ್ದರು. ಅದೊಮ್ಮೆ ರಜನಿ ಮತ್ತು ಮೋದಿ ಭೇಟಿ ನಡೆದಿತ್ತು. ಆಗ ಮೋದಿ ಕೊಟ್ಟ ಸಲಹೆ ಏನು ಗೊತ್ತೆ? ನಿಮ್ಮ ಸಿನಿಮಾದ ಎಲ್ಲಾ ವಿಭಾಗದ ಕೆಲಸವನ್ನು ಮತ್ತು ಕೆಲಸಗಾರರನ್ನು ಇಲ್ಲಿವರನ್ನೇ ಬಳಸಿದರೆ, ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಇನ್ನಷ್ಟು ತೂಕ ಬರುತ್ತದೆ ಎಂದಿದ್ದರು. ಅದನ್ನು ಸೀರಿಯಸ್ ಆಗಿ ತೆಗೆದುಕೊಂಡ ರಜನಿ ಅದೇ ರೀತಿ 2.0 ಸಿನಿಮಾ ಮುಗಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಬಂದ ರಜನಿಯ ಕಬಾಲಿ ಎಂಟು ನೂರು ಕೋಟಿಯನ್ನು ಗಳಿಸಿದ್ದು ನಿಜ. ಆದರೆ ಅಭಿಮಾನಿಗಳು ಅಷ್ಟೇನೂ ಖುಷಿ ಪಡಲಿಲ್ಲ. ಸದ್ಯಕ್ಕೆ ಕಾಳ ಕರಿಕಾಳನ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಆ ಸಿನಿಮಾ ರಿಲೀಸ್ ಆದ ಮೇಲೆ 2.0 ಸಿನಿಮಾ ನೋಡುವ ಭಾಗ್ಯ ನಿಮಗೆ ಸಿಗುತ್ತದೆ. ಅದು ಈ ವರ್ಷವಂತೂ ಖಂಡಿತ ಅಲ್ಲ. ಅದೇನಿದ್ದರೂ ಮುಂದಿನ ವರ್ಷ. ರಜನಿ-ಶಂಕರ್-ಅಕ್ಷಯ್-ಆಕಿ ಜಾಕ್ಸನ್…ಇವರೊಂದಿಗೆ ರಕ್ತ ಸುರಿಸಿ ಕೆಲಸ ಮಾಡಿದ ತಂತ್ರಜ್ಞರು. ವಾರೇ ವ್ಹಾ…ಒಂದು ಸಿನಿಮಾ ರಿಲೀಸ್‍ಗೂ ಮುಂಚೆಯೇ ಸೂಪರ್ ಹಿಟ್ ಆಗುವುದೆಂದರೆ ಇದೇನಾ?