ಮುಂಬೈ: ಶ್ರೀಲಂಕಾ ಪರ ಮೊಹಾಲಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಕ್ಯಾಪ್ ಧರಿಸಿದ್ದ ವಾಷಿಂಗ್ಟನ್ ಸುಂದರ್, ಇದೀಗ ಚೊಚ್ಚಲ ಟ್ವೆಂಟಿ-20 ಪಂದ್ಯವನ್ನಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ವಾಷಿಂಗ್ಟನ್, ಈ ಮೂಲಕ ಟೀಂ ಇಂಡಿಯಾ ಪರ ಟ್ವೆಂಟಿ-20 ಮಾದರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿರುವ ಅತಿ ಕಿರಿಯ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
Advertisement
ಪ್ರಸ್ತುತ ವಾಷಿಂಗ್ಟನ್ ಸುಂದರ್ ಅವರಿಗೆ 18 ವರ್ಷ, 80 ದಿನ ತುಂಬಿದೆ. ಇಲ್ಲಿಯವರೆಗೆ ರಿಷಭ್ ಪಂತ್ ಅವರು ಟೀಂ ಇಂಡಿಯಾ ಪ್ರತಿನಿಧಿಸಿದ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 19 ವರ್ಷ 120 ದಿನ ತುಂಬಿದ ಸಂದರ್ಭದಲ್ಲಿ 2016 ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಪಂದ್ಯವನ್ನು ರಿಷಭ್ ಪಂತ್ ಆಡಿದ್ದರು.
Advertisement
ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಬ್ಲೂ ಕ್ಯಾಪ್ ಧರಿಸಿದ್ದ ಸುಂದರ್, ಭಾರತದ ತಂಡದಲ್ಲಿ ಸ್ಥಾನ ಪಡೆದ ಏಳನೇ ಅತ್ಯಂತ ಕಿರಿಯ ಆಟಗಾರರಾಗಿದ್ದರು. ಭಾರತ ಪರ ಏಕದಿನ ಕ್ರಿಕೆಟ್ ನಲ್ಲಿ ಕಿರಿಯ ವಯಸ್ಸಿಗೆ ಸ್ಥಾನ ಪಡೆದ ಹೆಗ್ಗಳಿಕೆ ಸಚಿನ್ ಅವರ ಹೆಸರಿನಲ್ಲಿದ್ದು, ಸಚಿನ್ 1989 ರಲ್ಲಿ ತಮ್ಮ 16 ವರ್ಷ 238 ದಿನದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರು.
Advertisement
ವಾಷಿಂಗ್ಟನ್ ಸುಂದರ್ ಹೆಸರು ಬಂದಿದ್ದು ಹೇಗೆ?
ಕಿರಿಯ ವಯಸ್ಸಿನಲ್ಲೇ ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದ ವಾಷಿಂಗ್ಟನ್ ಸುಂದರ್ ತಮ್ಮ ಹೆಸರಿನಿಂದಲೇ ಹಲವರಿಗೆ ಅಚ್ಚರಿಯಾಗಿ ಕಾಣಿಸಿ ಅಮೆರಿಕದ ವಾಷಿಂಗ್ಟನ್ ನಲ್ಲಿ ಜನಿಸಿದ್ದಾರಾ ಎನ್ನುವ ಪ್ರಶ್ನೆ ಮೂಡದೇ ಇರಲಾರದು. ಆದರೆ ಈ ಹೆಸರಿನ ಹಿಂದೆ ಒಂದು ಭಾವನಾತ್ಮಕ ಕತೆಯೂ ಇದೆ.
ಚೆನ್ನೈನ ಹಿಂದೂ ಕುಟುಂಬದ ಮೂಲದ ಸುಂದರ್ ಅವರ ತಂದೆಯೂ ಕ್ರಿಕೆಟ್ ಆಟಗಾರರಾಗಿದ್ದು, ಕ್ರಿಕೆಟ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಈ ಮೂಲಕ ತಮಿಳುನಾಡು ರಣಜಿ ತಂಡದಲ್ಲೂ ಕಾಣಿಸಿಕೊಂಡಿದ್ದರು. ಇದೇ ವೇಳೆ ಚೆನ್ನೈನ ಬೀಚ್ ಪಕ್ಕ ವಾಸಿಸುತ್ತಿದ್ದ ಮಾಜಿ ಯೋಧ ಪಿಡಿ ವಾಷಿಂಗ್ಟನ್ ಇವರ ಆಟವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು. ಅಲ್ಲದೇ ಅವರಿಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡುವ ಮೂಲಕ ಬಡತನದ ಮಧ್ಯೆ ಕ್ರಿಕೆಟ್ ಆಟಕ್ಕೆ ಪ್ರೋತ್ಸಾಹ ನೀಡಿದ್ದರು. ಆದರೆ 1999 ರಲ್ಲಿ ಪಿಡಿ ವಾಷಿಂಗ್ಟನ್ ಅವರು ನಿಧನರಾಗುತ್ತಾರೆ. ಅವರ ನಿಧನದ ಕೆಲವೇ ತಿಂಗಳುಗಳ ಅಂತರದಲ್ಲಿ (ಅಕ್ಟೋಬರ್ 5) ಸುಂದರ್ ಹುಟ್ಟುತ್ತಾರೆ. ತಮ್ಮ ಜೀವನದ ಸಾಧನೆಗೆ ಕಾರಣವಾಗಿದ್ದ ವಾಷಿಂಗ್ಟನ್ ಅವರಿಗೆ ಗೌರವ ಪೂರ್ವಕವಾಗಿ ತಮ್ಮ ಮಗನಿಗೆ ವಾಷಿಂಗ್ಟನ್ ಸುಂದರ್ ಎಂದು ಹೆಸರಿಡುತ್ತಾರೆ. ಇದನ್ನೂ ಓದಿ: ಕೊನೆಯಲ್ಲಿ ಕಾರ್ತಿಕ್ ಸಿಕ್ಸರ್, ಕ್ಲೀನ್ ಸ್ವೀಪ್ ಗೈದು ಸರಣಿ ಗೆದ್ದ ಟೀಂ ಇಂಡಿಯಾ
ವಾಷಿಂಗ್ಟನ್ ಸುಂದರ್ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ (ಐಪಿಎಲ್) ಪುಣೆ ಸೂಪರ್ ಜೈಂಟ್ಸ್ ಮತ್ತು ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.