- ಉಮರ್ ಪುಸ್ತಕ ಪ್ರೇಮಿಯಾಗಿದ್ದ
ನವದೆಹಲಿ: ಐತಿಹಾಸಿಕ ಕೆಂಪು ಕೋಟೆಯ (Delhi Red Fort)ಬಳಿ 9 ಜನರನ್ನು ಬಲಿ ಪಡೆದ ಕಾರು ಸ್ಫೊಟ ಪ್ರಕರಣದಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಶಂಕಿತ ಉಗ್ರ ವೈದ್ಯ ಉಮರ್‌ನ ತಾಯಿ ಹಾಗೂ ಆತನ ಇಬ್ಬರು ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಉಮರ್‌ನ ಅತ್ತಿಗೆ ಪ್ರತಿಕ್ರಿಯಿಸಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡಿರುವ ಕುಟುಂಬಸ್ಥರು, ಡಾ.ಉಮರ್ ಫರಿದಾಬಾದ್‍ನಲ್ಲಿ 2-3 ವರ್ಷದಿಂದ ಇದ್ದ. ಆತ ಶ್ರೀನಗರದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದ. ಒಂದೆರಡು ತಿಂಗಳ ಹಿಂದೆ ಮನೆಗೆ ಬಂದು ಹೋಗಿದ್ದ. ದೆಹಲಿಯಲ್ಲಿ ನಡೆದ ಸ್ಫೋಟದಿಂದ ನಮಗೆ ಆಘಾತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಡಿಕ್ಕಿಯಲ್ಲಿ ಮಾತ್ರವಲ್ಲ ಕಾರಿನ ಮುಂಭಾಗದಲ್ಲೂ ಇತ್ತು ಸ್ಫೋಟಕ!
ಸೋಮವಾರ ರಾತ್ರಿ ಪೊಲೀಸರು ಮನೆಗೆ ಬಂದಿದ್ದರು. ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಇಬ್ಬರು ಸಹೋದರರನ್ನ ಕರೆದುಕೊಂಡು ಹೋಗಿದ್ದಾರೆ. ಅವರ ಸಂಪರ್ಕ ಪ್ರಯತ್ನ ಪಟ್ಟರೂ ಸಿಗುತ್ತಿಲ್ಲ. ಫೋನ್ ರಿಂಗ್ ಆಗುತ್ತಿದೆ ಎಂದು ಹೇಳಿದ್ದಾರೆ.
ಕುಟುಂಬದ ಭರವಸೆಯಾಗಿದ್ದ ಉಮರ್
ಉಮರ್ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಶುಕ್ರವಾರ ನಾನು ಅವನೊಂದಿಗೆ ಮಾತನಾಡಿದ್ದೆ. ಉಮರ್ ಪುಸ್ತಕ ಪ್ರೇಮಿಯಾಗಿದ್ದ. ಮನೆಗೆ ಬಂದಾಗಲೆಲ್ಲಾ ಅಧ್ಯಯನ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದ.
ಉಮರ್‌ನ ತಾಯಿ ಕುಟುಂಬವನ್ನು ಬಡತನದಿಂದ ಮುಕ್ತಗೊಳಿಸಲು ಶ್ರಮಿಸಿದ್ದರು. ಬಡತನದಿಂದ ಹೊರಬರಲು ಉಮರ್ ನಮ್ಮ ಏಕೈಕ ಭರವಸೆಯಾಗಿದ್ದ ಎಂದು ಅವರು ಭಾವುಕರಾಗಿದ್ದಾರೆ.
ಡಾ. ಉಮರ್‌ನ ಇಬ್ಬರು ಸಹೋದರರಾದ ಆಶಿಕ್ ಅಹ್ಮದ್, ಜಹೂರ್ ಅಹ್ಮದ್ ಮತ್ತು ಅವನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಮರ್‌ನ ಹಿರಿಯ ಸಹೋದರ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಕಿರಿಯ ಸಹೋದರ ಸ್ಟೆನೋಗ್ರಫಿ ಕಲಿಯುತ್ತಿದ್ದಾನೆ.
ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ. ಉಮರ್ ಯು ನಬಿ (Umar Nabi) ಸೂಸೈಡ್ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ (Faridabad Terror Module) ಜೊತೆ ಸಂಬಂಧ ಹೊಂದಿದ್ದ ಪುಲ್ವಾಮಾ ಮೂಲದ ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ. ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ ಸೋಮವಾರ ಏಕಾಂಗಿಯಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಾಂಗ್ಲಾದಿಂದ ಭಾರತದ ಮೇಲೆ ದಾಳಿ ಮಾಡುತ್ತೇವೆ: 10 ದಿನದ ಹಿಂದೆ ಬೆದರಿಕೆ ಹಾಕಿದ್ದ ಪಾಕ್ ಉಗ್ರ

