ಕೋಲಾರ: ಸಂಸದ ಮುನಿಸ್ವಾಮಿ ಹಾಗೂ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮಧ್ಯೆ ಪ್ರತಿಷ್ಠೆಯ ಕಾಳಗ ಮುಂದುವರೆದಿದೆ.
ಅದರಲ್ಲೂ ಮಾಲೂರು ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪರಸ್ಪರ ನಿಂದಿಸಿಕೊಂಡಿದ್ದ ಇಬ್ಬರು ನಾಯಕರು ಇಂದು ಮತ್ತೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಇಬ್ಬರ ನಡುವೆ ಜೋರಾಗಿಯೇ ಗದ್ದಲ ನಡೆದಿದೆ. ಸಾಮಾನ್ಯ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯುತಿತ್ತು. ಈ ವೇಳೆ ಶಾಸಕ ನಂಜೇಗೌಡ ಹಾಗೂ ಸಂಸದ ಮುನಿಸ್ವಾಮಿ ನಡುವೆ ಮಾತಿನ ಯುದ್ಧ ಏರ್ಪಟ್ಟಿತ್ತು.
ನಗರೊತ್ಥಾನ ಯೋಜನೆ ಸೇರಿದಂತೆ ಪುರಸಭಾ ಕಾಮಗಾರಿಗಳ ವಿಚಾರದಲ್ಲಿ ಶಾಸಕರ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಂಸದ ಮುನಿಸ್ವಾಮಿ ಶಾಸಕ ನಂಜೇಗೌಡ ಜೊತೆಗೆ ಮಾತು ಬೆಳೆಸಿದರು. ಅಲ್ಲದೆ ಅಧ್ಯಕ್ಷರು ಹಾಗೂ ಬಿಜೆಪಿ ಸದಸ್ಯರ ಗಮನಕ್ಕೆ ತರದೆ ಶಾಸಕರೇ ಕೆಲ ಪುರಸಭೆ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಆರೋಪಿಸಿದರು. ಹಾಗಾಗಿ ಇಂದು ನಡೆದ ಮಾಲೂರು ಪುರಸಭಾ ಸಾಮಾನ್ಯ ಸಭೆಯಲ್ಲಿ ಗದ್ದಲ ಹಾಗೂ ಕೋಲಾಹಲ ಸೃಷ್ಟಿಯಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು
ಇನ್ನೂ ತಾವು ಜವಾಬ್ದಾರಿಯುತ ಜನಪ್ರತಿನಿಧಿಗಳು ಎಂಬುದನ್ನು ಮರೆತು ಇಬ್ಬರು ನಾಯಕರು ಏಕವಚನದಲ್ಲೇ ಪರಸ್ವರ ವಾಗ್ವಾದ ಮಾಡಿಕೊಂಡರು. ಆ ಮೂಲಕ ಮಾಲೂರು ಪುರಸಭೆ ಸಂಸದ ಹಾಗೂ ಶಾಸಕರ ಪ್ರತಿಷ್ಠೆಯ ಕಾಳಗಕ್ಕೆ ವೇದಿಕೆಯಾಗಿತ್ತು. ಇನ್ನೂ ಸಭೆಯಲ್ಲಿದ್ದ ಅಧಿಕಾರಿಗಳು, ಸದಸ್ಯರು ಸೇರಿದಂತೆ ಪೊಲೀಸರು ಮೂಕ ಪ್ರೇಕ್ಷಕರಾಗಿ ಕಾಳಗವನ್ನು ನೋಡಿದರು. ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು