ನವದೆಹಲಿ: ಬಿಜೆಪಿಯ (BJP) ಯತ್ನಾಳ್ (Basangouda Patil Yatnal) ನೇತೃತ್ವದ ನಿಯೋಗ ವಕ್ಫ್ (Waqf Board) ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ (Jagdambika Pal) ಅವರನ್ನು ಭೇಟಿಯಾಗಿ, ರಾಜ್ಯದಲ್ಲಿನ ವಕ್ಫ್ ಸಂಬಂಧಿಸಿದ ವರದಿ ಸಲ್ಲಿಸಿದೆ.
ಕಲಬುರಗಿ, ಬೀದರ್, ಬಿಜಾಪುರ, ಯಾದಗಿರಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಸಂಗ್ರಹಿಸಿದ ಮಾಹಿತಿ ವರದಿಯಲ್ಲಿದೆ. ಅಲ್ಲದೇ ವಕ್ಫ್ ಇತ್ತಿಚೆಗೆ ನೋಟಿಸ್ ನೀಡಿದ ಆಸ್ತಿಗಳ ಬಗ್ಗೆ ಜಗದಾಂಬಿಕಾ ಪಾಲ್ ಅವರಿಗೆ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಮಾಹಿತಿ ನೀಡಿದರು.
ಸಭೆ ಬಳಿಕ ಮಾತನಾಡಿದ ಅರವಿಂದ್ ಲಿಂಬಾವಳಿ, ವಕ್ಫ್ ಜೆಪಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದೇವೆ. ಬಹಳ ಹೊತ್ತು ನಮ್ಮ ತಂಡದ ಜೊತೆ ಚರ್ಚೆ ಮಾಡಿದ್ದಾರೆ. ಯತ್ನಾಳ್ ವಿಜಯಪುರದ ಹೋರಾಟಕ್ಕೆ ಪಾಲ್ ಬಂದಿದ್ದರು. ಪಾಲ್ ಕೊಟ್ಟಂತಹ ಸಲಹೆ ಮೇರೆಗೆ ಪ್ರವಾಸ ಮಾಡಿದ್ದೆವು. ಏಳು ಜಿಲ್ಲೆಗಳಲ್ಲಿ ನಮ್ಮ ತಂಡ ಪ್ರವಾಸ ಮಾಡಿತ್ತು. ವರದಿಯನ್ನು ಈಗ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.
ಕೇಸ್ ಟು ಕೇಸ್ ವರದಿ ತಯಾರಿಸಿ ಎಂದು ಸಲಹೆ ನೀಡಿದ್ದಾರೆ. ಬುಧವಾರ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸುತ್ತೇವೆ. ರೈತರಿಗೆ ಮಠಾಧೀಶರಿಗೆ ಮಾತು ಕೊಟ್ಟಂತೆಯೇ ನಾವು ವರದಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಈ ವೇಳೆ ಬಿಜೆಪಿಯ ಯತ್ನಾಳ್ ಬಣದ ಕುಮಾರ ಬಂಗಾರಪ್ಪ, ಜಿಎಂ ಸಿದ್ದೇಶ್ವರ್, ಬಿ.ಪಿ ಹರೀಶ್, ರಮೇಶ್ ಜಾರಕಿಹೋಳಿ, ಅರವಿಂದ್ ಲಿಂಬಾವಳಿ ಮತ್ತು ಬಿ.ವಿ ನಾಯಕ್ ಇದ್ದರು.