ಬೆಂಗಳೂರು/ವಿಜಯರಪುರ: ಕರ್ನಾಟಕದ ವಿಜಯಪುರ (Vijayapura) ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ವಕ್ಫ್ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು (Shoba Karandlaje) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಆಗ್ರಹಿಸಿದ್ದಾರೆ.
ವಕ್ಫ್ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು, ರೈತರು ಮತ್ತು ಮಠ ಮಂದಿರಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿದನ್ನು ತಗೆದು ಹಾಕಿ, ಮೂಲ ಭೂಮಾಲೀಕರ ಹೆಸರನ್ನು ಮತ್ತೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಸಲ್ಮಾನ್ ಖಾನ್‌ಗೆ ಬೆದರಿಕೆ – ತುಮಕೂರಲ್ಲಿ ಆರೋಪಿ ಅರೆಸ್ಟ್
Advertisement
Advertisement
ಕರ್ನಾಟಕ (Karanataka) ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಕ್ಫ್ ಇಲಾಖೆ ವತಿಯಿಂದ, ಜಮೀನನ್ನು ಅತಿಕ್ರಮಣ ಮಾಡುವುದು ಮತ್ತು ರೈತರಿಗೆ ನೋಟಿಸ್ ಕೊಡುವುದು ಆರಂಭವಾಗಿದೆ. ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಸಲುವಾಗಿ ಜೆ.ಪಿ.ಸಿ ನೇಮಕ ಮಾಡಿದ್ದಾರೆ. ನಂತರ ಕರ್ನಾಟಕ ರಾಜ್ಯದಲ್ಲಿ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್‌ರವರು ವಕ್ಫ್ ಅದಾಲತ್‌ನ್ನು ತರಾತುರಿಯಲ್ಲಿ ನಡೆಸಿದ್ದಾರೆ. ಈ ಮೂಲಕ ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಾವಿರಾರು ರೈತರ ಜಮೀನು, ಮಠಗಳು, ದೇವಸ್ಥಾನಗಳು ಮತ್ತು ಪುರಾತತ್ವ ಇಲಾಖೆಯ ಜಾಗಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿ, ಹಲವಾರು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು (Waqf Property) ನಮೂದಾಗಿದೆ.
Advertisement
Advertisement
ವಿಜಯಪುರ ಜಿಲ್ಲೆಯಲ್ಲಿ 15 ಸಾವಿರ ಎಕರೆಗಿಂತಲೂ ಹೆಚ್ಚು ರೈತರ ಜಮೀನನ್ನು ವಕ್ಫ್ ಆಸ್ತಿಯೆಂದು ನಮೂದಿಸಲಾಗಿದೆ. ವಿಜಯಪುರದ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ, ಸಿಂದಗಿಯ ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ ರಾಜ್ಯದ ಇತರೆ ಭಾಗಗಳಲ್ಲಿ ಕುರುಬರ ಆರಾಧ್ಯದೈವ ಭೀರದೇವರ ದೇವಸ್ಥಾನ, ಮಂಡ್ಯದ ಚಿಕ್ಕಮ್ಮ ದೇವಸ್ಥಾನ, ಹಾವೇರಿಯ ಆಂಜನೇಯ ದೇವಸ್ಥಾನ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಹಂಪಿಯ ಹಲವಾರು ಪ್ರದೇಶಗಳು, ಕಲಬುರಗಿ, ಯಾದಗಿರಿ, ಬೀದರನ ಹಲವಾರು ಪ್ರಸಿದ್ಧ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವುದು ಖಂಡನೀಯ ಎಂದಿದ್ದಾರೆ.
ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿ ಜಮೀರ್ ಅಹ್ಮದ್ ಖಾನ್‌ರವರು (Zameer Ahmed Khan) ಮತಾಂಧ ಭಾಷಣಗಳನ್ನು ಮಾಡುತ್ತಾ, ಅಲ್ಲಾನ ಸಲುವಾಗಿ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಚಾಲುಕ್ಯರು, ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನಗಳನ್ನು, 12ನೇ ಶತಮಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮರವರು ಮಠಗಳಿಗೆ ದಾನ ಕೊಟ್ಟಿದ್ದ ಜಮೀನು ವಕ್ಫ್ ಆಸ್ತಿಯಾಗಲು ಹೇಗೆ ಸಾಧ್ಯ? ಇದರ ಹಿಂದೆ ಇರುವ ಹುನ್ನಾರವೇನು? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಮುಂದಿಟ್ಟ ಆರು ಬೇಡಿಕೆಗಳು ಯಾವವು?
- ಕರ್ನಾಟಕದ ವಿಜಯಪುರ ಜಿಲ್ಲೆ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ವಕ್ಫ್ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು.
- ರೈತರು ಮತ್ತು ಮಠ ಮಂದಿರಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿರುವುದನ್ನು ತೆಗೆದು ಹಾಕಿ, ಮೂಲ ಭೂಮಾಲೀಕರ ಹೆಸರನ್ನು ಮತ್ತೆ ಸೇರ್ಪಡೆ ಮಾಡಬೇಕು. 1974ರ ರಾಜ್ಯ ಪತ್ರ ಮತ್ತು ನಂತರದ ಸಂಬಂಧಿತ ಎಲ್ಲ ರಾಜ್ಯ ಪತ್ರಗಳನ್ನು ರದ್ದುಪಡಿಸಬೇಕು.
- ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಪರಿಶೀಲಿಸಿ, ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ, ಸದರಿ ನಮೂದನ್ನು ತೆಗೆದು ಹಾಕಲು ತ್ವರಿತವಾಗಿ ಕ್ರಮವಹಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು.
- ಮುಂದುವರೆದು, ನಿಯಮಬಾಹಿರವಾಗಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಸಚಿವರ ಮೌಖಿಕ ಆದೇಶ ಪಾಲಿಸಿ ಕಾನೂನು ಬಾಹಿರವಾಗಿ ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು.
- ದಿಶಾಂಕ್ ಆಪ್‌ಲ್ಲಿ ತಪ್ಪು ನಮೂದುಗಳನ್ನು ರದ್ದು ಮಾಡಿ, ಸಾರ್ವಜನಿಕರು ಮತ್ತು ಅಧಿಕಾರಿಗಳು ಪರಿಶೀಲನೆ ಮಾಡಿದ ತರುವಾಯ ಜನರಿಗೆ ನಿಖರ ಮಾಹಿತಿ ನೀಡಬೇಕು ಹಾಗೂ ದಿಶಾಂಕ್ ಆಪ್ ಮತ್ತು ಭೂಮಿ ತಂತ್ರಾಂಶದ ಸರ್ವರ್ ನಿಷ್ಕ್ರಿಯ ಆಗಿರುವುದನ್ನು ತಕ್ಷಣ ಸರಿ ಮಾಡಬೇಕು.
- ವಕ್ಫ್ ಜಮೀನಿನಲ್ಲಿ ಆದ ಅಕ್ರಮದ ಬಗ್ಗೆ, ಅನ್ನರ ಮಾಣಿಪ್ಪಾಡಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ಕಂಡು ಬಂದ ಅಕ್ರಮಗಳ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ತಕ್ಷಣ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಯಾವ ಕ್ಷೇತ್ರವೂ ರಾಜಕಾರಣಿಗಳ ಭದ್ರಕೋಟೆ ಅಲ್ಲ, ಜನರ ಭದ್ರಕೋಟೆ: ಮಹದೇವಪ್ಪ