ರಾಯಚೂರು: ಇಷ್ಟು ದಿನ ರೈತರು, ಮಠ ಮಾನ್ಯಗಳಿಗೆ ತಟ್ಟಿದ್ದ ವಕ್ಫ್ ಬಿಸಿ ಈಗ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗೂ ತಟ್ಟಿದೆ. ರಾಯಚೂರಿನ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಶರಣಗೌಡ ಬಯ್ಯಾಪೂರಗೆ ಬಿಸಿ ತಟ್ಟಿದ್ದು ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದೆ.
ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಜ್ಜಲ್‌ಗೆ ಸೇರಿದ ಲಿಂಗಸುಗೂರಿನ ಮುದಗಲ್ ಸೀಮೆಯ ಸ.ನಂ 242/7 ರ 1 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿದೆ. 2016-17 ರಲ್ಲಿ ಖರೀದಿಸಿದ್ದ ಜಮೀನಿನಲ್ಲಿ ವಕ್ಫ್ ಹೆಸರು ನಮೂದಾಗಿದ್ದು, ಸರಿಪಡಿಸುವಂತೆ ಶಾಸಕ ವಜ್ಜಲ್ ಈಗಾಗಲೇ ತಹಶೀಲ್ದಾರ್ ಹಾಗೂ ಲಿಂಗಸುಗೂರು ಎಸಿ ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಡಾ ಹಗರಣಕ್ಕೆ ಟ್ವಿಸ್ಟ್ – ಜಿಟಿ ದೇವೇಗೌಡ ಸಂಬಂಧಿಗೆ 19 ಸೈಟ್ ಹಂಚಿಕೆ!
ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಹೆಸರಿನ ಜಮೀನನ ಪಹಣಿಯಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಸರ್ವೆ ನಂ. 242/4 ರ ಒಂದು ಎಕರೆ ಜಮೀನು 2007-08 ರಲ್ಲಿ ಖರೀದಿಸಿದ್ದ ಬಯ್ಯಾಪೂರ ಈಗಾಗಲೇ ಜಮೀನು ಎನ್‌ಎ ಮಾಡಿಸಿದ್ದಾರೆ. ಜೊತೆಗೆ ಅದೇ ಸ.ನಂ. ನಲ್ಲಿರುವ ಲಿಂಗಸುಗೂರಿನ ಅಂಕಲಿಮಠದ ಶ್ರೀಗಳಿಗೂ ಬಿಸಿ ತಟ್ಟಿದ್ದು, ಸ.ನಂ 242/8 ರ ಫಕೀರಸ್ವಾಮಿಗೆ ಸೇರಿದ 19 ಗುಂಟೆ ಜಮೀನಿನಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಮುದಗಲ್‌ನ ಸ.ನಂ 242 ರ ಒಟ್ಟು 30 ಎಕರೆ ಜಮೀನಿನ ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಾಗಿದೆ.