– ಷರಿಯಾ ಕೋರ್ಟ್‌ಗೆ ಬರಬೇಕಾಗುತ್ತೆ ಅಂತ ಆವಾಜ್
ಮಡಿಕೇರಿ: ಇದ್ದಕ್ಕಿದ್ದಂತೆ ಮಹಿಳೆಯೊಬ್ಬರ ಮನೆಯ ಆವರಣಕ್ಕೆ ಪ್ರವೇಶಿಸಿ ನೀವು ವಕ್ಫ್ ಆಸ್ತಿಯನ್ನು (Waqf Property) ಅತಿಕ್ರಮಿಸಿಕೊಂಡು ಮನೆ ಕಟ್ಟಿದೀರಿ, ತೆರವುಗೊಳಿಸಿ ಎಂದು ಕೆಲವರು ಬೆದರಿಕೆ ಒಡ್ಡಿದ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಕೊಡಗು ಎಸ್ಪಿಗೆ ಗ್ರಾಮದ ಮಹಿಳೆ ರೇಣುಕಾ ಉತ್ತಪ್ಪ ದೂರು ನೀಡಿದ್ದಾರೆ. ತಾವು ತಮ್ಮ ಕುಶಾಲನಗರದ (Kushalnagar) ಮುಳ್ಳುಸೋಗೆ ಮನೆಯಲ್ಲಿ ಒಬ್ಬರೇ ಇರುವಾಗ ಇಬ್ಬರು ಬಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರ ನಿಮ್ಮ ಜಹಗೀರು ಅಂದುಕೊಂಡಿದ್ದೀರಾ? – ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ
ದೂರಿನಲ್ಲಿ ಏನಿದೆ?
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ರೇಣುಕಾ ಉತ್ತಪ್ಪ ಮುಳ್ಳುಸೋಗೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಕಳೆದ ಅಕ್ಟೋಬರ್ 25ರಂದು ಬೆಳಿಗ್ಗೆ 11 ಗಂಟೆಗೆ, ತಾವೊಬ್ಬರೇ ಮನೆಯಲ್ಲಿ ಇರುವಾಗ ಅನ್ಯ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಮನೆಯ ಆವರಣಕ್ಕೆ ಪ್ರವೇಶಿಸಿದ್ದಾರೆ. ಇದು ವಕ್ಫ್ ಆಸ್ತಿ, ತಕ್ಷಣವೇ ಮನೆಯನ್ನು ತೆರವುಗೊಳಿಸಿ ವಕ್ಫ್‌ಗೆ ಒಪ್ಪಿಸುವಂತೆ ಬೆದರಿಸಿದ್ದಾರೆ.
ಆಗ ನಾನು ನನ್ನ ತಂದೆ 1984 ರಲ್ಲಿ ಮುಳ್ಳುಸೋಗೆಯಲ್ಲಿ ಸರ್ವೆ ನಂಬರ್ 79/2 ರಲ್ಲಿ 36 ಸೆಂಟ್ಸ್ ಜಮೀನನ್ನು ಮಾನ್ಯಪಂಡ ಬೋಪಣ್ಣ ಎಂಬುವವರಿಂದ ಖರೀದಿಸಿದ್ದರು. ಅಂದಿನಿಂದ ನಾವು ಇದೇ ಆಸ್ತಿಯಲ್ಲಿ ವಾಸಿಸುತ್ತಿದ್ದೇವೆ. ಇತ್ತೀಚೆಗೆ ನನ್ನ ಪೋಷಕರು ನಿಧನರಾದರು, ನಂತರ ನಾನು ಇದನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇನೆ, ಏಕೆ ತೆರವುಗೊಳಿಸಬೇಕು? ನಿಮ್ಮ ಬಳಿ ಯಾವುದಾದರೂ ನ್ಯಾಯಾಲಯದ ನೋಟಿಸ್ ಅಥವಾ ವಕ್ಫ್‌ಗೆ ಸೇರಿರುವುದಕ್ಕೆ ದಾಖಲೆ ಕೊಡಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಸಿಎಂ ಹೆಸರು ಹಾಳು ಮಾಡಲು ಮುಡಾ ಕೇಸ್‌ನಲ್ಲಿ ಆರೋಪ ಮಾಡ್ತಿದ್ದಾರೆ – ದಿನೇಶ್ ಗುಂಡೂರಾವ್
ಆಗ ಅವರು ನೀವು ಮನೆ ಖಾಲಿ ಮಾಡದಿದ್ದರೇ ಹೊರಗೆ 15 ಜನರು ಇದ್ದಾರೆ. ಅವರನ್ನು ಕರೆಯುವುದಾಗಿ ಬೆದರಿಸಿದರು. ಇದರಿಂದ ಕೋಪಗೊಂಡ ಮಹಿಳೆ ಕೂಡಲೇ ಮನೆಯ ಆವರಣದಿಂದ ಹೊರ ಹೋಗುವಂತೆ ಗದರಿಸಿದ್ದಾರೆ. ಆಗ ಅವರು ನಮಗೆ ಷರಿಯಾ ಕೋರ್ಟ್ ಇದೆ. ನೀವು ಬೆಂಗಳೂರಿನ ಷರಿಯಾ ಕೋರ್ಟ್‌ಗೆ (Sharia Court) ಬರಬೇಕಾಗುತ್ತದೆ. ಅಲ್ಲಿ ನಿಮ್ಮ ಮಾಲೀಕತ್ವ ಸಾಬೀತುಪಡಿಸಬೇಕು ಎಂದು ಬೆದರಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್
ಘಟನೆ ಕುರಿತು ಕೊಡವ ಸಮಾಜದ ಒಕ್ಕೂಟಗಳ ಅಧ್ಯಕ್ಷರಿಗೂ ಸೂಕ್ತ ನೆರವು ನೀಡುವಂತೆ ಕೋರಿ ದೂರು ಸಲ್ಲಿಸಿದ್ದಾರೆ. ಕುಶಾಲನಗರ ಪೋಲೀಸರು ತನಿಖೆ ನಡೆಸುತಿದ್ದು, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.