ಬೆಂಗಳೂರು: ಸದ್ಯ ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ (Waqf Board) ಹೆಸರು ದಾಖಲಾಗಿರುವುದೇ ಸುದ್ದಿ. ಇಲ್ಲಿಯವರೆಗೂ ಇದು ಕೇವಲ ಹಿಂದೂಗಳ ಜಮೀನಿನ ಸಮಸ್ಯೆ ಅಂದುಕೊಳ್ಳಲಾಗಿತ್ತು. ಆದರೆ ಈ ವಕ್ಫ್ ಮುಸ್ಲಿಂರ ಪಹಣಿಯಲ್ಲೂ ಸದ್ದು ಮಾಡುತ್ತಿದೆ.
ಧಾರವಾಡ (Dharwad) ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಎನ್ನದೇ ಸಣ್ಣಪುಟ್ಟ ರೈತರ ಜಮೀನುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನೂ ಹಾವೇರಿ (Haveri) ಜಿಲ್ಲೆಯ ಕಡಕೋಳ ಗ್ರಾಮದ ವಕ್ಫ್ ಗಲಾಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕುಂದಾನಗರಿಗೂ ವಕ್ಫ್ ಕಾಲಿಟ್ಟಿದೆ.
ಧಾರವಾಡ ಜಿಲ್ಲೆಯ ನವಲಗುಂದ (Navalagund) ಪಟ್ಟಣದ ಮುಸ್ಲಿಂ ಸಮುದಾಯದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದಕ್ಕೂ ಮೊದಲು ಉಪ್ಪಿನಬೆಟಗೇರಿ (UppinBetageri) ಹಾಗೂ ಗರಗ (Garaga) ಗ್ರಾಮಗಳಲ್ಲಿನ 20ಕ್ಕೂ ಹೆಚ್ಚು ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಾಗಿರುವುದು ಬಯಲಿಗೆ ಬಂದಿತ್ತು. ಈ ಸಂಬಂಧ ರೈತರು ಪ್ರತಿಭಟನೆ ಮಾಡಿದ ಪರಿಣಾಮ ನ.5ರಂದು ಜಿಲ್ಲೆಯ ತಹಶೀಲ್ದಾರ, ವಕ್ಫ್ ಅಧಿಕಾರಿಗಳು ಮತ್ತು ರೈತರು ಒಟ್ಟಾಗಿ ಸಭೆ ನಡೆಸಲು ಮುಂದಾಗಿದ್ದಾರೆ.ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ಹಳೆಯ ಕ್ರಸ್ಟ್‌ಗೇಟ್ ಮಾರಾಟ ಮಾಡಲು ಹುನ್ನಾರ
ಇನ್ನೂ ನವಲಗುಂದ ತಾಲೂಕಿನ ಮುಸ್ಲಿಂ ಸಮುದಾಯದ ಹುನಗುಂದ ಎಂಬ ಕುಟುಂಬವು 1961ರಲ್ಲಿಯೇ ಖರೀದಿ ಮಾಡಿದ ಜಮೀನಿನ ವಿಚಾರವಾಗಿ ಸಹೋದರರ ಮಧ್ಯೆ ಇತ್ತೀಚೆಗೆ ವ್ಯಾಜ್ಯ ಉಂಟಾಗಿತ್ತು. ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಮಾಲೀಕರಿಗೆ ತಿಳಿದು ಬಂದಿದೆ. ಇದರಿಂದಾಗಿ ಆಘಾತಗೊಂಡಿರುವ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಿದ್ದಾರೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಡಕೋಳ ಗ್ರಾಮ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಬುಧವಾರ ರಾತ್ರಿ ಕಡಕೋಳ ಗ್ರಾಮದಲ್ಲಾದ ಗಲಾಟೆಗೆ ಗ್ರಾಮಸ್ಥರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಡಕೋಳದಲ್ಲಿರುವ ಆಂಜನೇಯ ದೇವಸ್ಥಾನವೂ ಸಹ ಮಸೀದಿ ಜಾಗದಲ್ಲಿದೆ ಎಂದು ಮುಸಲ್ಮಾನ ಮುಖಂಡರು ಗ್ರಾಮಸ್ಥರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಗಲಾಟೆಗೆ ಆಗಿದ್ದು, ಗ್ರಾಮಸ್ಥರು ರೊಚ್ಚಿಗೆದ್ದು ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಇನ್ನು ಮಸೀದಿಗೂ ಮೊದಲು ಅಲ್ಲಿ ದೇವಸ್ಥಾನ ಇತ್ತು. ಅದಕ್ಕೆ ಪುರಾವೆಯಾಗಿ ಚತುರ್ಮುಖ ಬ್ರಹ್ಮನ ವಿಗ್ರಹ ಸಿಕ್ಕಿದೆ ಎಂದು ಮುಖಂಡರು ಪ್ರತಿಪಾದಿಸಿದರು. ಇತ್ತ ಶಾಸಕ ರುದ್ರಪ್ಪ ಲಮಾಣಿ ಕಡಕೋಳಕ್ಕೆ ಭೇಟಿ ನೀಡಿದ್ದು, ಪೊಲೀಸರು 32 ಜನರನ್ನು ಬಂಧಿಸುವಾಗ ಎಲ್ಲಿ ಹೋಗಿದ್ರಿ? ಎಂದು ಶಾಸಕನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಬೆಳಗಾವಿ ಜಿಲ್ಲೆಯ ರೈತರಿಗೂ ವಕ್ಫ್ ಬೋರ್ಡ್ ಶಾಕ್ ತಗುಲಿದೆ. 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ವಕ್ಫ್ ಬೋರ್ಡ್ ಹೊಡೆತಕ್ಕೆ ದಂಗಾದ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ.
ಒಟ್ಟಿನಲ್ಲಿ ವಕ್ಫ್ ವಿವಾದ ದಿನೇ ದಿನೇ ರಾಜ್ಯದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ್ದು, ಇನ್ನಾದರೂ ಸರ್ಕಾರ ಗಮನಹರಿಸಿ ರೈತರ ಸಮಸ್ಯೆಗೆ ಪರಿಹಾರ ಸೂಚಿಸಬೇಕಿದೆ.ಇದನ್ನೂ ಓದಿ: ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ