ವಿಜಯಪುರ: ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೆಲವೆಡೆ ಅಷ್ಟಕಷ್ಟೆ. ಆದರೆ, ಇನ್ನೊಂದೆಡೆ ವಿಪರೀತವಾಗಿ ಸುರಿದು ಬೆಳೆ ಹಾಳಾಗಿವೆ. ಇದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಇದೀಗ ಜಿಲ್ಲೆಯ ರೈತರಿಗೆ ವಕ್ಫ್ ಬೋರ್ಡ್ ಮತ್ತೊಂದು ಶಾಕ್ ಕೊಟ್ಟಿದೆ.
ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರು ವಕ್ಫ್ ಬೋರ್ಡ್ ನೋಟಿಸ್ ನೋಡಿ ದಂಗಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕ್ಷೇತ್ರದ ಹೊನವಾಡ ಗ್ರಾಮದ 15 ರೈತರಿಗೆ ನೋಟಿಸ್ ಹೋಗಿದೆ. ರೈತರಿಗೆ ದಿಕ್ಕು ತೋಚದಂತಾಗಿದ್ದಾರೆ.
ನೋಟಿಸ್‌ನಲ್ಲಿ ನಿಮ್ಮ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚಿಸಲಾಗಿದೆ. ಆದರೆ, ವಿಜಯಪುರ ಜಿಲ್ಲಾಧಿಕಾರಿಗಳು, ನೋಟಿಸ್‌ಗೆ ರೈತರು ಹೆದರುವ ಅವಶ್ಯಕತೆ ಇಲ್ಲ. ಸಂಬಂಧಪಟ್ಟ ಕಚೇರಿಗೆ ಸೂಕ್ತ ದಾಖಲಾತಿ ನೀಡಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸಂಸದ ಹಾಗೂ ವಕ್ಫ್ ಜಂಟಿ ಸದನ ಸಮಿತಿಯ ಸದಸ್ಯರಾದ ತೇಜಸ್ವಿ ಸೂರ್ಯರನ್ನು ರೈತರು ಭೇಟಿ ಮಾಡಿದ್ದಾರೆ. ನ್ಯಾಯ ಒದಗಿಸುವಂತೆ ಕೋರಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಅಧಿಕ ಕೆರೆ ಜಾಗವನ್ನು ವಕ್ಫ್ ತನ್ನ ಆಸ್ತಿ ಎಂದು ನೋಟಿಸ್ ಜಾರಿಗೊಳಿಸಿದೆ. ಇದರ ಹೊರತಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿಯೂ ಕೂಡ ವಕ್ಫ್ ಅಕ್ರಮವಾಗಿ ಆಸ್ತಿ ಕಬಳಿಕೆಗೆ ಮುಂದಾಗಿದೆ. ಇದು ಅಕ್ಷ್ಯಮ್ಯ ಅಪರಾಧ ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.