ನವದೆಹಲಿ: ವಕ್ಫ್ ಬೋರ್ಡ್ನಲ್ಲಿ ಸುಧಾರಣೆ ತರುವ ಸಲುವಾಗಿ ಕೇಂದ್ರ ಸರ್ಕಾರ, ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಆದರೆ, ನಿರೀಕ್ಷೆಯಂತೆ ಇದಕ್ಕೆ ಕಾಂಗ್ರೆಸ್ ಸೇರಿ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯ್ತು. ಪರಿಣಾಮವಾಗಿ ಕೇಂದ್ರ ಸರ್ಕಾರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳಿಸಿಕೊಟ್ಟಿದೆ.
ಸಂಸತ್‌ನಲ್ಲಿ ಕೇಂದ್ರ ಮಂತ್ರಿ ಕಿರಣ್ ರಿಜಿಜು ಈ ಮಸೂದೆ ಮಂಡಿಸಿದರು. ಇದಕ್ಕೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ, ಡಿಎಂಕೆ, ಎಂಐಎಂ, ಕಮ್ಯುನಿಸ್ಟ್ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಮಸೂದೆ ಖಂಡಿಸಿ ಸದನದಲ್ಲಿ ಗದ್ದಲ ಉಂಟು ಮಾಡಿದವು. ಆದರೆ, ನಿಮ್ಮ ಕೈಲಿ ಆಗದ ಕಾರಣ ನಾವು ತಿದ್ದುಪಡಿ ಮಾಡ್ಬೇಕಿದೆ ಎಂದು ಕಿರಣ್ ರಿಜಿಜು ಕೌಂಟರ್ ಕೊಟ್ಟರು.
ರಾಜ್ಯ ವಕ್ಫ್ ಬೋರ್ಡ್ಗಳು ಮಾಫಿಯಾ ಆಗಿವೆ ಎಂದು ವಿಪಕ್ಷಗಳ ಅನೇಕರು ನನ್ನ ಬಳಿ ದೂರು ನೀಡಿದ್ದಾರೆ. ನಾನು ಅವರ ಹೆಸರೇಳಿ ಅವರ ರಾಜಕೀಯ ಜೀವನ ನಾಶ ಮಾಡಲು ಹೋಗಲ್ಲ ಎಂದು ರಿಜಿಜು ಹೇಳಿಕೊಂಡರು. ರಿಜಿಜು ಮಾತಿಗೆ ಆಕ್ರೋಶ ವ್ಯಕ್ತವಾಯ್ತು. ಇದು ಕ್ರೂರ ಬಿಲ್.. ಸಂವಿಧಾನದ ಮೇಲಿನ ದಾಳಿ ಎಂದು ಕೆಸಿ ವೇಣುಗೋಪಾಲ್ ಆರೋಪಿಸಿದರು.
ವಕ್ಫ್ ಬೋರ್ಡ್ನಲ್ಲಿ ಮುಸ್ಲಿಮೇತರರನ್ನು ನೇಮಕ ಮಾಡುವ ನಿಯಮವನ್ನು ವಿರೋಧಿಸಿದರು. ಹಿಂದೂ ದೇವಾಲಯಗಳನ್ನು ನಿರ್ವಹಿಸಲು ಕ್ರೈಸ್ತರು, ಮುಸ್ಲಿಮರಿಗೆ ಆಗುತ್ತಾ ಎಂದು ಕನಿಮೋಳಿ ಪ್ರಶ್ನಿಸಿದರು. ಈ ಮಸೂದೆ ರಾಜಕೀಯ ಷಡ್ಯಂತ್ರ ಎಂದು ಸಮಾಜವಾದಿ ಪಕ್ಷ ಟೀಕಿಸಿತು.
ಸ್ಟಾಂಡಿಂಗ್ ಕಮಿಟಿಗೆ ವಹಿಸುವಂತೆ ಎನ್‌ಸಿಪಿ ಒತ್ತಾಯಿಸಿತು. ತೀವ್ರ ವಿರೋಧ ಹಿನ್ನೆಲೆಯಲ್ಲಿ ಇದನ್ನು ಜೆಪಿಸಿಗೆ ಕಳಿಸಲು ಕೇಂದ್ರ ಸರ್ಕಾರ ಒಪ್ಪಿತು.