ಬೇಸಗಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ, ಮನೆಯೊಳಗಿದ್ದರೂ ಧಗೆಯ ಬೇಗೆ ಹೆಚ್ಚಾಗಿದೆ. ಫ್ಯಾನು ಎ.ಸಿ ಬಿಟ್ಟಿರಿಂಗೇ ಇಲ್ಲ. ಈ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗಿರುವಂತೆ ನೋಡಿಕೊಳ್ಳವುದು ಬಹಳ ಮುಖ್ಯ. ಅದಕ್ಕಾಗಿ ದೇಹ ತಂಪಾಗಿರಲು ದೇಹದಲ್ಲಿ ನೀರಿನ ಅಂಶ ಪ್ರಮುಖ ಪಾತ್ರವಹಿಸುತ್ತದೆ. ನೀರು, ಪಾನೀಯಗಳ ಜೊತೆ ಹಣ್ಣುಗಳು ಸಹ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ನಾವು ಇಂತಹ ಸಮಯದಲ್ಲಿ ನಾವು ಸೇವಿಸುವ ಆಹಾರ, ಧರಿಸುವ ಬಟ್ಟೆ, ಇರುವ ವಾತಾವರಣ ಎಲ್ಲವೂ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ನಿರ್ಜಲೀಕರಣಕ್ಕೆ ಒಳಗಾಗುವುದು ಒಂದು ತೊಂದರೆಯಾದರೆ, ಬೆವರು, ಬೆವರುಸಾಲೆ, ಚರ್ಮ ಒಣಗುವಿಕೆ, ಬಿಸಿಲಿಗೆ ಒಡ್ಡಿದ ಚರ್ಮದ ಭಾಗ ಕಪ್ಪಗಾಗುವುದು, ಬಿರಿಯುವುದು ಮೊದಲಾದ ತೊಂದರೆಯಾಗಿವೆ. ಈ ತೊಂದರೆಗಳಿಗೆ ಆಯುರ್ವೇದ ಕ್ಷಾರೀಯ ಆಹಾರಗಳನ್ನು ಸೇವಿಸುವಂತೆ ಸಲಹೆ ಮಾಡುತ್ತದೆ ಹಾಗೂ ದೇಹವನ್ನು ತಂಪಾಗಿರಿಸಲು ಕೆಲವು ಕ್ರಮಗಳನ್ನುಸೂಚಿಸಿದೆ. ಅದಕ್ಕೆ ನಾವೇನು ಮಾಡಬೇಕು ಅನ್ನೋದರ ಕುರಿತು ಒಂದಿಷ್ಟು ಟಿಪ್ಸ್ ಇಲ್ಲಿದೆ…
ದೈನಂದಿನ ತ್ವಚೆಯ ಆರೈಕೆಯಲ್ಲಿ ಕೊಬ್ಬರಿ ಎಣ್ಣೆ ಸೇರಿಸಿಕೊಳ್ಳಿ
ನಿತ್ಯವೂ ಬೆಳಿಗ್ಗೆ, ಸ್ನಾನಕ್ಕೂ ಮುನ್ನ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಚೆನ್ನಾಗಿ ತಿಕ್ಕಿಕೊಳ್ಳಿ. ಈ ಮೂಲಕ ತ್ವಚೆಗೆ ತಂಪಾದ ಅನುಭವ ಸಿಗುವ ಜೊತೆಗೇ ಉರಿಯಾಗದೇ ಇರಲೂ ಸಾಧ್ಯವಾಗುತ್ತದೆ. ಕೊಬ್ಬರಿ ಎಣ್ಣೆ ಲಭ್ಯವಿಲ್ಲದಿದ್ದರೆ ಸೂರ್ಯಕಾಂತಿ ಎಣ್ಣೆಯನ್ನೂ ಬಳಸಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಪಿತ್ತ ಶಮನಗೊಳಿಸುವ ಆಹಾರ ಸೇವಿಸಿ
ದೇಹವನ್ನು ತಂಪಾಗಿರಿಸಲು ಪಿತ್ತವನ್ನು ಶಮನಗೊಳಿಸುವ ಗುಣವಿರುವ ಆಹಾರಗಳನ್ನು ಬೇಸಿಗೆಯಲ್ಲಿ ಸೇವಿಸಬೇಕು. ಇವು ದೇಹವನ್ನು ತಂಪಾಗಿಸುವ ಜೊತೆಗೆ ಹೆಚ್ಚುವರಿ ಶಾಖವನ್ನು ದೇಹದಿಂದ ಹೊರಹಾಕಲೂ ನೆರವಾಗುತ್ತವೆ. ಇದಕ್ಕಾಗಿ ನೀರಿನಂಶ ಹೆಚ್ಚಾಗಿರುವ ಆಹಾರಗಳಾದ ಕಲ್ಲಂಗಡಿ, ಮರಸೇಬು (ಪಿಯರ್ಸ್), ಸೇಬು, ಪ್ಲಂ ಹಣ್ಣುಗಳು, ವಿವಿಧ ಬೆರ್‍ರಿ ಹಣ್ಣುಗಳು, ಪ್ರೂನ್ಸ್ ಮೊದಲಾದವುಗಳನ್ನು ಸೇವಿಸಬೇಕು. ಜೊತೆಗೇ ತರಕಾರಿಗಳಾದ ಶತಾವರಿ, ಬ್ರೋಕೋಲಿ, ಬ್ರಸಲ್ಸ್ ಮೊಗ್ಗುಗಳು, ಸೌತೆಕಾಯಿ ಮೊದಲಾದವುಗಳನ್ನೂ ಸೇವಿಸಬೇಕು., ಪುದಿನಾ, ಮಜ್ಜಿಗೆ ಮೊದಲಾದವುಗಳಿಂದ ತಯಾರಿಸಿದ ಪಾನೀಯಗಳೂ ಉತ್ತಮ ಆಯ್ಕೆಯಾಗಿವೆ.
ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ
ಜೀರ್ಣಾಗ್ನಿ ಅತ್ಯಂತ ಪ್ರಬಲವಾಗಿದ್ದಾಗಿನ ಸಮಯದಲ್ಲಿಯೇ ಊಟ ಮಾಡಿ. ಇದು ನಡು ಮಧ್ಯಾಹ್ನ ಅಥವಾ ಸೂರ್ಯ ಸರಿಯಾಗಿ ನೆತ್ತಿಯ ಮೇಲಿದ್ದಾಗ ಗರಿಷ್ಟವಾಗಿರುತ್ತದೆ. ಈ ಸಮಯದಲ್ಲಿ ಆಹಾರ ಸೇವಿಸುವ ಮೂಲಕ ಪಿತ್ತದೋಶ ಎದುರಾಗುವುದಿಲ್ಲ. ಇದೇ ಕಾರಣದಿಂದ ಮಧ್ಯಾಹ್ನದ ಊಟ ಬಿಡಬಾರದು, ಬಿಟ್ಟರೆ ಪಿತ್ತದೋಶ ಎದುರಾಗುತ್ತದೆ ಮತ್ತು ದೇಹದಲ್ಲಿ ಉರಿಯೂತ ಹಾಗೂ ಚಡಪಡಿಕೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ದಿನದ ಮೂರೂ ಹೊತ್ತಿನ ಊಟಗಳನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು. ತಡವೂ ಆಗಬಾರದು ಮತ್ತು ಬಿಡಲೂಬಾರದು. ಜೊತೆಗೆ ನೀರನ್ನು ಸಾಧ್ಯವಾದಷ್ಟು ಕುಡಿಯುತ್ತಲೇ ಇರಬೇಕು. ಜೊತೆಗೆ ಬಿಸಿ ಪೇಯಗಳಿಂದ ಅಂದ್ರೆ ಕಾಫೀ, ಟೀ ಅಂತಹ ದೇಹದ ಉಷ್ಣಾಂಶ ಹೆಚ್ಚಿಸುವ ಲಿಕ್ವಿಡ್‌ಗಳನ್ನು ಸೇವಿಸಬಾರದು.
ಸ್ನಾನಕ್ಕೆ ತಣ್ಣೀರು ಬಳಸಿ
ಬೇಸಿಗೆಯಲ್ಲಿ ನಿಮ್ಮ ದೇಹವು ಒಳಗಿನಿಂದ ತುಂಬಾ ಬಿಸಿಯಾಗುತ್ತಿದ್ದರೆ, ನೀವು ಸ್ನಾನಕ್ಕೆ ತಣ್ಣೀರನ್ನು ಬಳಸಬೇಕು. ಹೀಗೆ ಮಾಡಿದಾಗ, ನಿಮ್ಮ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಸ್ನಾನದ ನಂತರವೂ ನಿಮಗೆ ತುಂಬಾ ಸೆಕೆ ಅನಿಸುತ್ತಿದ್ದರೆ, ನಿಮ್ಮ ಮಣಿಕಟ್ಟು, ಕುತ್ತಿಗೆ, ಹಣೆ ಮತ್ತು ಪಾದಗಳಿಗೆ ಕೂಲಿಂಗ್ ಪ್ಯಾಕ್‌ಗಳನ್ನು ಬಳಸಬಹುದು.
ಹಗುರ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ
ಬೇಸಿಗೆಯಲ್ಲಿ ಸಡಿಲ ಮತ್ತು ಹಗುರವಾದ ಬಟ್ಟೆಗಳನ್ನು ಧರಿಸುವುದರಿಂದ ದೇಹವನ್ನು ಇನ್ನಷ್ಟು ಆರಾಮದಾಯಕಗೊಳಿಸಬಹುದು. ಇದರಿಂದ ದೇಹದ ಉಷ್ಣತೆ ಹೆಚ್ಚಾಗದಂತೆ ನಿಯಂತ್ರಣದಲ್ಲಿಡಬಹುದು.