ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ? ಯಾವ ದೇಶದಲ್ಲಿ ಏನಾಗಿದೆ?

Public TV
5 Min Read
cyber attack main

ಮೇ13ರಂದು ಮೂರನೇ ಮಹಾಯುದ್ಧ ಆರಂಭವಾಗಲಿದೆ. ಬಹುತೇಕ ರಾಷ್ಟ್ರಗಳು ಈ ಯುದ್ಧದ ಪರಿಣಾಮದಿಂದ ತತ್ತರಿಸಲಿದೆ ಎಂದು ದಾರ್ಶನಿಕನೊಬ್ಬ ಭವಿಷ್ಯ ನುಡಿದಿದ್ದ. ಆದರೆ ಈ ಯುದ್ಧ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಈಗ ಸೈಬರ್ ಯುದ್ಧ ಆರಂಭವಾಗಿದ್ದು, ಭಾರತ, ಅಮೆರಿಕ, ಇಂಗ್ಲೆಂಡ್, ರಷ್ಯಾ, ಜರ್ಮನಿ ಒಳಗೊಂಡಂತೆ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಹ್ಯಾಕರ್ಸ್ ಗಳು ದಾಳಿ ನಡೆಸಿದ್ದಾರೆ. ಹ್ಯಾಕರ್ಸ್‍ಗಳ ಈ ಭಯಾನಕ ದಾಳಿಗೆ ವಿಶ್ವವೇ ಬೆಚ್ಚಿ ಬಿದ್ದಿದೆ. ಹೀಗಾಗಿ ಏನಿದು ಸೈಬರ್ ದಾಳಿ? ಯಾವ ದೇಶದಲ್ಲಿ ಏನು ಸಮಸ್ಯೆಯಾಗಿದೆ ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ದಾಳಿಯಾಗಿದ್ದು ಯಾವಾಗ?
ಸೈಬರ್ ದಾಳಿ ಹೊಸದೆನಲ್ಲ. ಆದರೆ ಈ ದಾಳಿ ಭಯಾನಕವಾಗಿದ್ದು, ‘ವನ್ನಾ ಕ್ರೈ’ ಎನ್ನುವ ಮಾಲ್‍ವೇರ್‍ನ 100ಕ್ಕೂ ಹೆಚ್ಚು ರಾಷ್ಟ್ರಗಳ ಲಕ್ಷಕ್ಕೂ ಅಧಿಕ ಕಂಪ್ಯೂಟರ್‍ಗಳು ಮೇಲೆ ದಾಳಿ ನಡೆಸಿವೆ. ಶುಕ್ರವಾರ ರಾತ್ರಿಯಿಂದ ಈ ದಾಳಿ ಆರಂಭವಾಗಿದ್ದು, ಬಹುತೇಕ ರಾಷ್ಟ್ರಗಳು ತಲ್ಲಣಗೊಂಡಿವೆ.

wanny crypt

ಏನಿದು wannacry ransomware?
ಇಲ್ಲಿಯವರೆಗೆ ಹ್ಯಾಕರ್‍ಗಳು ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ನಿಮ್ಮ ಸಿಸ್ಟಂನಲ್ಲಿರುವ ಮಾಹಿತಿ, ಇತ್ಯಾದಿಗಳನ್ನು ಕದಿಯುತ್ತಿದ್ದರು. ಆದರೆ ಇದು ಸ್ವಲ್ಪ ಭಿನ್ನ ಮತ್ತು ಅಪಾಯಕಾರಿ. ಈ ಮಾಲ್ವೇರ್ ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ನಡೆಸಿದರೆ ಮಾಹಿತಿಯನ್ನು ಕದಿಯುವುದು ಮಾತ್ರ ಅಲ್ಲ ನಿಮ್ಮ ಸಿಸ್ಟಂನಲ್ಲಿರುವ ದಾಖಲೆಗಳನ್ನು ಲಾಕ್ ಮಾಡಿ ಬಿಡುತ್ತದೆ. ಹ್ಯಾಕರ್ ಗಳು ತಾವು ಹೇಳಿದ ಸಮಯದೊಳಗೆ, ಕೇಳಿದಷ್ಟು ಹಣವನ್ನು ಪಾವತಿಸದೇ ಇದ್ದರೆ ಈ ದಾಖಲೆಗಳನ್ನೆಲ್ಲ ಡಿಲೀಟ್ ಮಾಡಿಬಿಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಹೀಗಾಗಿ ಇದು ಈಗ ದೊಡ್ಡ ಸಮಸ್ಯೆಯಾಗಿದೆ.

ದಾಳಿ ನಡೆಸಿದವರು ಯಾರು?
ಈ ಮಾಲ್ವೇರ್ ದಾಳಿ ನಡೆಸಿದವರು ಯಾರು ಎನ್ನುವುದು ತಿಳಿದುಬಂದಿಲ್ಲ. ಆದರೆ ದಾಳಿ ನಡೆಸಿದ ವ್ಯಕ್ತಿಗಳು ರಾನ್ಸ್‍ಂವೇರ್ ಸಾಫ್ಟ್ ವೇರ್ ಬಳಸಿ ಫೈಲ್‍ಗಳನ್ನು ಲಾಕ್ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಎಲ್ಲಿ ಏನು ಸಮಸ್ಯೆಯಾಗಿದೆ?
ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‍ಎಚ್‍ಎಸ್) ಸೇರಿದ 37ಕ್ಕೂ ಆಸ್ಪತ್ರೆಗಳಿಗೆ  ಭಾರಿ ಹೊಡೆತ ಬಿದ್ದಿದ್ದು, ವೈದ್ಯರು ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಜಪಾನಿನ ಅಟೋಮೊಬೈಲ್ ಕಂಪೆನಿ ನಿಸ್ಸಾನ್, ಅಮೆರಿಕದ ಅಂಚೆ ಮತ್ತು ಸರಕು ಸಾಗಣೆಯ ಫೆಡ್‍ಎಕ್ಸ್ ಕಂಪೆನಿ, ರಷ್ಯಾದ ಕೇಂದ್ರಿಯ ಬ್ಯಾಂಕ್ ಮತ್ತು ದೂರ ಸಂಪರ್ಕಗಳು, ಸ್ಪೇನಿನ `ಟೆಲಿಫೋನಿಕಾ’ ಸೇರಿದಂತೆ ಪ್ರಮುಖ ಕಂಪೆನಿಗಳ ಕಂಪ್ಯೂಟರ್ ಗಳ ಮೇಲೆ ಈ ದಾಳಿ ನಡೆದಿದೆ.

acyber attack

ಭಾರತದದಲ್ಲಿ ಎಲ್ಲಿ ದಾಳಿಯಾಗಿದೆ?
ಆಂಧ್ರದ ಪೊಲೀಸ್ ಇಲಾಖೆಯ ಮೇಲೆ ವನ್ನಾ ಕ್ರೈ ಸೈಬರ್ ದಾಳಿ ನಡೆದಿದೆ. ಸುಮಾರು 25 ಪ್ರತಿಶತ ಕಂಪ್ಯೂಟರ್‍ಗಳು ಈ ಮಾಲ್‍ವೇರ್ ದಾಳಿಯಾಗಿದೆ ಎಂದು ಐಜಿಪಿ ಇ. ದಾಮೋದರ್ ತಿಳಿಸಿದ್ದಾರೆ.

ಯಾವ ಓಎಸ್ ಮೇಲೆ ದಾಳಿ?
ಹೆಚ್ಚಾಗಿ ವಿಂಡೋಸ್ ಎಕ್ಸ್ ಪಿ ಆಪರೇಟಿಂಗ್ ಸಿಸ್ಟಮ್ ಬಳಸುವ ಕಂಪ್ಯೂಟರ್‍ಗಳು ತೊಂದರೆಗೀಡಾಗಿದೆ. ದಾಳಿಯ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್ ಪಿ,ವಿಂಡೋಸ್ ವಿಸ್ತಾ, ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಸೆಕ್ಯೂರಿಟಿ ಅಪ್‍ಡೇಟ್ ನೀಡಿದೆ.

ಹ್ಯಾಕರ್ಸ್ ಬೇಡಿಕೆ ಏನು?
ಬಿಟ್‍ಕಾಯಿನ್ ರೂಪದಲ್ಲಿ ತಾವು ತಿಳಿಸಿದ ನಂಬರ್‍ಗೆ 300 ಡಾಲರ್ (ಸುಮಾರು 19,000 ರೂ.) 3 ದಿನಗಳೊಳಗೆ ಒಳಗಡೆ ನೀಡಬೇಕು. ಈ ಡೆಡ್‍ಲೈನ್ ಮೀರಿದರೆ 6 ದಿನಗಳ ಒಳಗಡೆ 600 ಡಾಲರ್(ಸುಮಾರು 38,500 ರೂಪಾಯಿ) ನೀಡಬೇಕಾಗುತ್ತದೆ. ಒಂದು ವೇಳೆ ಇಷ್ಟು ಮೊತ್ತದ ಹಣವನ್ನು ಪಾವತಿ ಮಾಡದೇ ಇದ್ದರೆ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

WannaCrypt

ಬಿಟ್‍ಕಾಯಿನ್ ನಲ್ಲಿ ಪಾವತಿಸಲು ಹೇಳಿದ್ದೇಕೆ?
ಭಾರತದಲ್ಲಿ ಹೇಗೆ ರೂಪಾಯಿ, ಅಮೆರಿಕದಲ್ಲಿ ಡಾಲರ್ ಇದೆಯೋ ಅದೇ ರೀತಿಯಾಗಿ ಇಂಟರ್‍ನೆಟ್‍ನಲ್ಲಿ ಬಳಕೆಯಾಗುತ್ತಿರುವ ವರ್ಚುಯಲ್ ಹಣವೇ ಬಿಟ್‍ಕಾಯಿನ್. ಈ ಹಣ ಕಣ್ಣಿಗೆ ಕಾಣುವುದಿಲ್ಲ ಮತ್ತು ಮನೆಗೆ ತರಲಾಗುವುದಿಲ್ಲ. ಈ ಬಿಟ್ ಕಾಯಿನ್ ಪರಿಚಯಿಸಿದ ವ್ಯಕ್ತಿ ಯಾರು ಎನ್ನುವ ಬಗ್ಗೆ ಇನ್ನು ಗೊಂದಲವಿದೆ. ಈ ಬಿಟ್ ಕಾಯಿನ್‍ಗಳನ್ನು ಸರ್ಕಾರ ಅಥವಾ ಯಾವುದೇ ಬ್ಯಾಂಕ್ ನಿಯಂತ್ರಿಸುವುದಿಲ್ಲ. ಸಮೂಹವೊಂದು ಬಿಟ್ ಕಾಯಿನ್ ಅನ್ನು ನಿಯಂತ್ರಿಸುತ್ತಿದೆ. ಆದರೆ ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸಿದವರು ಯಾರು ಎನ್ನುವ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಬಿಟ್ ಕಾಯಿನ್ ಮೂಲಕ ಈ ಹ್ಯಾಕರ್ಸ್ ಗಳು ಹಣಗಳಿಸುವ ದಂಧೆಗೆ ಇಳಿದಿದ್ದಾರೆ.

ದಾಳಿಯಾಗಿದೆ ಎಂದು ತಿಳಿಯುವುದು ಹೇಗೆ?
ಯಾವುದೋ ಇಮೇಲ್‍ಗೆ ಅಟ್ಯಾಚ್ ಆಗಿ ಈ ಮಾಲ್ವೇರ್ ಅನ್ನು ಹ್ಯಾಕರ್ಸ್ ಹರಿಯಬಿಡುತ್ತಾರೆ. ಈ ಮೇಲ್ ಓಪನ್ ಮಾಡಿದ ತಕ್ಷಣ ನಿಮ್ಮ ಕಂಪ್ಯೂಟರ್ ಮಾತ್ರ ಅಲ್ಲದೇ ಕಂಪ್ಯೂಟರ್ ಜೊತೆಗೆ ಸಂಪೂರ್ಣ ಡಿನ್‍ಎಸ್(ಡೊಮೈನ್ ನೇಮ್ ಸಿಸ್ಟಂಗೆ) ಮೇಲೆ ದಾಳಿ ಮಾಡುತ್ತದೆ. ದಾಳಿಯಾದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಹ್ಯಾಕರ್ಸ್‍ಗಳು ನಾವು ನಿಮ್ಮ ಕಂಪ್ಯೂಟರ್ ಲಾಕ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೆಸೇಜ್ ಸ್ಕ್ರೀನ್ ನಲ್ಲಿ ಕಾಣುತ್ತದೆ.

ಅಮೆರಿಕದ ಎಡವಟ್ಟಿನಿಂದ ದಾಳಿ?
ವಿಂಡೋಸ್ ಎಕ್ಸ್‍ಪಿ ಸಾಫ್ಟ್ ವೇರ್‍ನಲ್ಲಿದ್ದ ದೋಷವೊಂದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‍ಎಸ್‍ಎ) ಪತ್ತೆ ಹಚ್ಚಿತ್ತು. ಎನ್‍ಎಸ್‍ಎ ಪತ್ತೆಹಚ್ಚಿದ್ದ ಈ ಕೋಡ್‍ಗಳನ್ನು ಶ್ಯಾಡೋಬ್ರೋಕರ್ಸ್ ಎನ್ನುವ ಗುಂಪೊಂದು ಕದ್ದು ಏಪ್ರಿಲ್‍ನಲ್ಲಿ ಇಂಟರ್‍ನೆಟ್ ನಲ್ಲಿ ಹರಿಯಬಿಟ್ಟಿತ್ತು. ಈ ಕೋಡ್ ಬಳಸಿಕೊಂಡು ಈಗ ರಾನ್ಸಂವೇರ್ ಮಾಲ್ವೇರನ್ನು ಹ್ಯಾಕರ್ ಗಳು ಹರಿಯಬಿಟ್ಟಿದ್ದಾರೆ ಎಂದು ಸೈಬರ್ ಭದ್ರತಾ ಸಂಸ್ಥೆಗಳ ಆರೋಪ. ಆದರೆ ಈ ಆರೋಪವನ್ನು ಅಮೆರಿಕ ಎನ್‍ಎಸ್‍ಎ ನಿರಾಕರಿಸಿದೆ.

ದಾಳಿಯಾದ್ರೆ ಮುಂದೇನು ಮಾಡಬೇಕು?
ವನ್ನಾಕ್ರೈ ಸಾಫ್ಟ್ ವೇರ್ ಮೂಲಕ ಕಂಪ್ಯೂಟರ್‍ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‍ಗಳು ಮಾರ್ಪಡಿಸಿದ್ದರಿಂದ ದಾಳಿಗೆ ಒಳಗಾಗಿರುವ ಕಂಪ್ಯೂಟರ್‍ಗಳಲ್ಲಿ ಫೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದೋ ನೀವು ಅವರು ಬೇಡಿಕೆ ಇಟ್ಟಷ್ಟು ಹಣವನ್ನು ನೀಡಬೇಕು ಇಲ್ಲದಿದ್ದರೆ, ನಿಮ್ಮ ದಾಖಲೆಗಳನ್ನು ಕಳೆದುಕೊಳ್ಳಲು ಸಿದ್ಧರಾರಾಗಬೇಕು.

ದಾಳಿಯಾಗದಂತೆ ತಡೆಯುವುದು ಹೇಗೆ?
ಇಮೇಲ್ ಓಪನ್ ಮಾಡುವಾಗ ಜಾಗೃತೆ ವಹಿಸಿ. ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಆಗಾಗ ಅಪ್‍ಡೇಟ್ ಮಾಡಿಕೊಳ್ಳಿ. ಆಂಟಿ ವೈರಸ್ ಸಾಫ್ಟ್ ವೇರ್ ಇನ್ ಸ್ಟಾಲ್ ಮಾಡಿ.

ದಾಳಿಯ ಎಚ್ಚರಿಕೆ ನೀಡಿದ್ದ ಭಾರತೀಯ ವೈದ್ಯ:
ಭಾರತೀಯ ಮೂಲದ ವೈದ್ಯ ಲಂಡನ್ ನ್ಯಾಷನಲ್ ಹಾಸ್ಪಿಟಲ್ ಫಾರ್ ನ್ಯೂರಾಲಜಿಯ ನರ ವಿಜ್ಞಾನ ತಜ್ಞ ಡಾ. ಕೃಷ್ಣ ಚಿಂತಾಪ ಅವರು ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ ಮೇಲೆ ಸೈಬರ್ ದಾಳಿಯ ಎಚ್ಚರಿಕೆಯನ್ನು ಬುಧವಾರ ನೀಡಿದ್ದರು. ಮೆಡಿಕಲ್ ಜರ್ನಲ್ ಗೆ ಬರೆದ ಲೇಖನದಲ್ಲಿ, ಕೇಂಬ್ರಿಡ್ಜ್ ಆಸ್ಪತೆಯ ನರ್ಸ್ ಒಬ್ಬರು ಇಮೇಲ್ ತೆರದ ಬಳಿಕ ಆಸ್ಪತ್ರೆಯ ಕಂಪ್ಯೂಟರ್‍ಗಳು ಮೇಲೆ ಹೇಗೆ ದಾಳಿ ಆಯ್ತು ಎನ್ನುವುದನ್ನು ವಿವರಿಸಿದ್ದರು. ಇವರು ಬರೆದ ಲೇಖನ ಪ್ರಕಟಗೊಂಡ ಎರಡೇ ದಿನದಲ್ಲಿ ಸೈಬರ್ ದಾಳಿಯಾಗಿದೆ.

indian origin doctor krishna chinthapalli

ವಿಪ್ರೋ ಮೇಲೆ ದಾಳಿ ಬೆದರಿಕೆ ಹಾಕಿದ್ದು ಇವರೇನಾ?
ಮೇ ಮೊದಲ ವಾರದಲ್ಲಿ ಬೆಂಗಳೂರಿನ ವಿಪ್ರೋ ಕಚೇರಿಗೆ ಬೆದರಿಕೆ ಇಮೇಲ್ ಬಂದಿತ್ತು. ಈ ಮೇಲ್‍ನಲ್ಲಿ ಬಿಟ್ ಕಾಯಿನ್ ಮೂಲಕ 500 ಕೋಟಿ ಡಿಜಿಟಲ್ ಕರೆನ್ಸಿ ನೀಡುವಂತೆ ಬೇಡಿಕೆ ಇಟ್ಟಿದ್ದ ಸಂದೇಶವಿತ್ತು. ಒಂದು ವೇಳೆ ಮೆ 25ರ ಒಳಗಡೆ ಈ ಬೇಡಿಕೆಯನ್ನು ಈಡೇರಿಸಿದೇ ಇದ್ದರೆ ಸಂಸ್ಥೆಯ ರಾಸಾಯನಿಕ ದಾಳಿ ನಡೆಸಲಾಗುವುದು ಎನ್ನುವ ಬೆದರಿಕೆ ಇಮೇಲ್‍ನಲ್ಲಿತ್ತು. ಈಗ ಈ ಸೈಬರ್ ದಾಳಿ ನಡೆದ ಬಳಿಕ ವಿಪ್ರೋದ ಮೇಲೆ ದಾಳಿ ಬೆದರಿಕೆ ನಡೆಸಿದವರು ಇವರೇನಾ ಎನ್ನುವ ಶಂಕೆ ಮೂಡಿದೆ.

ಇದನ್ನೂ ಓದಿ:ಬಿಟ್‍ಕಾಯಿನ್ ಮೂಲಕ 500 ಕೋಟಿ ಕೊಡಿ, ಇಲ್ಲವಾದ್ರೆ ರಿಸಿನ್ ವಿಷ ಹಾಕಿ ಕೊಲ್ತೀವಿ – ವಿಪ್ರೋ ಸಂಸ್ಥೆಗೆ ಬೆದರಿಕೆ

wanncry pad

wanna cry atm

 

Share This Article
Leave a Comment

Leave a Reply

Your email address will not be published. Required fields are marked *