ಉಪಚುನಾವಣೆ ತನಕ ತಂತಿ ಮೇಲಿನ ನಡಿಗೆ – ಕರಂದ್ಲಾಜೆ ಸಮರ್ಥನೆ

Public TV
1 Min Read
shobha karandlaje

ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತಂತಿ ಮೇಲಿನ ನಡಿಗೆ ಹೇಳಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದು, ಉಪಚುನಾವಣೆ ವರೆಗೆ ತಂತಿಯ ಮೇಲಿನ ನಡಿಗೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹೇಳಿಕೆ ಸಹಜವಾಗಿದೆ. ರಾಜ್ಯದಲ್ಲಿ ಉಪಚುನಾವಣೆ ಇನ್ನಷ್ಟೇ ಆಗಬೇಕು. ಬಿಜೆಪಿ ಬೆಂಬಲಕ್ಕೆ ಕೇವಲ 106 ಮಂದಿ ಶಾಸಕರಿದ್ದಾರೆ. ಬಹುಮತ ಸಾಧಿಸಲು ಸಂಖ್ಯೆ 113 ಆಗಲೇಬೇಕು. ಬಹುಮತ ಸಿಗುವ ತನಕ ನಮ್ಮದು ತಂತಿ ಮೇಲಿನ ನಡಿಗೆಯೇ ಆಗಿದೆ. ಉಪಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಿದೆ. ಸರ್ಕಾರ ಸ್ಥಿರ ಆದಮೇಲೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

BSY 6

ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಉಮೇಶ್ ಕತ್ತಿ ಅಸಮಾಧಾನದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಅವರು, ಸರ್ಕಾರದಲ್ಲಿ ಮಂತ್ರಿಗಳಾಗಿರುವವರ ಸಂಖ್ಯೆ ಕಡಿಮೆ ಇದೆ. ಹಿರಿಯ ಶಾಸಕರಿಗೆಲ್ಲ ಮಂತ್ರಿ ಆಗುವ ಅಪೇಕ್ಷೆ ಇದೆ. ಅಪೇಕ್ಷೆ ತಪ್ಪಲ್ಲ, ಅವರೂ ಸಹ ಅನೇಕ ಬಾರಿ ಗೆದ್ದಿದ್ದಾರೆ. ಎಲ್ಲರನ್ನೂ ತೃಪ್ತಿ ಪಡಿಸುವುದು ಸಹಜವಾಗಿ ಕಷ್ಟದ ಕೆಲಸ ಎಂದು ಬಿಜೆಪಿ ನಾಯಕರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಉಪ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ನರಿಗೆ ದ್ರಾಕ್ಷಿ ಹುಳಿಯಾಗಿಯೇ ಇರುತ್ತದೆ. ಅಧಿಕಾರ ಸಿಗದಿದ್ದಾಗ ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ಕಿಡಿಕಾರಿದರು.

Nalin Kumar Kateel

ಯಡಿಯೂರಪ್ಪ- ಕಟೀಲ್ ಸಮನ್ವಯ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು 40 ವರ್ಷ ರಾಜಕಾರಣ ಮಾಡಿದ್ದಾರೆ. ನಳೀನ್ ಕುಮಾರ್ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಬಿಜೆಪಿ ಮತ್ತು ಸರ್ಕಾರ ಒಟ್ಟು ಸೇರಿ ರಾಜ್ಯದ ಅಭಿವೃದ್ಧಿ ಮಾಡುತ್ತದೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ಮೇಯರ್ ಆಯ್ಕೆ ಕುರಿತು ಮಾತನಾಡಿದ ಅವರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮಗೆ ಬಹುಮತ ಇಲ್ಲ. ಏನಾದರೂ ಮಾಡಿ ಬಹುಮತ ಸಾಬೀತು ಮಾಡಬೇಕು. ಬೆಂಗಳೂರಿನ ನಾಯಕರ ವಿಶೇಷ ಪ್ರಯತ್ನದಿಂದ ಎಲ್ಲಾ ಸರಿಯಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *