ಆರ್.ಆರ್ ನಗರ ಮತ ಕೇಂದ್ರಕ್ಕೆ ಪತಿ ಸಮೇತ ಆಗಮಿಸಿದ್ದ ನಟಿ ಅಮೂಲ್ಯ (Amulya), ತಮ್ಮ ಮತದಾನದ (Voting) ಹಕ್ಕನ್ನು ಚಲಾಯಿಸಿದ್ದಾರೆ. ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ನಿಂತಿದ್ದ ಅಮೂಲ್ಯ, ಆ ನಂತರ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗ ವೋಟು ಹಾಕಿದ್ದಾರೆ.
ಮತದಾನದ ನಂತರ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.
ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿದ್ದ ಸಪ್ತಮಿ ಗೌಡ ಮತದಾನ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.
ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಮತದಾನ ಮಾಡಿ, ಮಾದರಿಯಾದರು. ದಂಪತಿ ಸಮೇತ ಬೆಳಗ್ಗೆ 7.20ಕ್ಕೆ ಆಗಮಿಸಿದ್ದ ಗಣೇಶ್ ಮತದಾನ ಮಾಡಿದರು. ಮತದಾನ ಮಾಡಿ ಮಾತನಾಡಿದ ಗಣೇಶ್, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು.
ಆರ್.ಆರ್ ನಗರದಲ್ಲಿ ಗಣೇಶ್ ದಂಪತಿ ತಮ್ಮ ಹಕ್ಕು ಚಲಾಯಿಸಿದರೆ, ಜೆಪಿ ನಗರ ಆಕ್ಸ್ ಫರ್ಡ್ ಮತಗಟ್ಟೆಯಲ್ಲಿ ನಟ ಸುದೀಪ್ ತಾಯಿ ಸರೋಜಾ ಅವರು ಮತ ಚಲಾಯಿಸಿದರು. ನಂತರ ಸುದೀಪ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.