ಬೆಂಗಳೂರು: ಪಕ್ಷ ಸಂಘಟನೆ ಹೇಗೆ ಮಾಡುತ್ತೇನೆ ಎನ್ನುವುದನ್ನು ಕಾದು ನೋಡಿ ಎಂದು ಜೆಡಿಎಸ್‍ನ ನೂತನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಹೇಳಿದ್ದಾರೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ಅನೇಕ ಮುಖಂಡರ ಜೊತೆಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಎಲ್ಲ ಮುಖಂಡರು ಯುವ ಘಟಕ ಅಧ್ಯಕ್ಷರನ್ನಾಗಿ ನಿಖಿಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ ಶರಣ್ ಗೌಡ ಅವರಿಗೆ ಯುವ ಘಟಕ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಚಿಂತನೆ ದೇವೇಗೌಡ ಅವರಿಗಿತ್ತು. ಆದರೆ ಬೆಳಗ್ಗೆ ಫೋನ್ ಮಾಡಿ, ನಿಮ್ಮನ್ನು ಯುವ ಘಟಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮುಖಂಡರು ತಿಳಿಸಿದರು. ಇದು ಕೇವಲ ಎಚ್.ಡಿ.ದೇವೇಗೌಡ ಅವರ ಆಯ್ಕೆಯಲ್ಲ ಎಂದು ತಿಳಿಸಿದರು.
ಪಕ್ಷದ ಮುಖಂಡರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ. ಜೆಡಿಎಸ್ ಅನೇಕ ಏಳು-ಬೀಳು ಕಂಡಿದೆ. ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಎಚ್.ಡಿ.ದೇವೇಗೌಡ ಅವರು ಮೂಲೆಗುಂಪು ಆಗುತ್ತಾರೆ ಎಂದು ಅನೇಕರು ತಿಳಿದಿದ್ದರು. ಆದರೆ ದೇವೇಗೌಡ ಅವರು ಇಳಿವಯಸ್ಸಿನಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ನಿಖಿಲ್ ಹೇಳಿದರು.
ನಾನು ಪಕ್ಷ ಕಟ್ಟಲು ಎಚ್.ಡಿ.ದೇವೇಗೌಡ ಅವರೇ ಸ್ಫೂರ್ತಿ. ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮತದಾರರು ನನ್ನ ಪರವಾಗಿ ಮತ ಹಾಕಿದ್ದಾರೆ. ನನ್ನ ವಿರುದ್ಧ ಮತ ಹಾಕಿರುವ ಜನರ ಮನಸ್ಸು ಗೆಲ್ಲುವ ಕೆಲಸ ಮಾಡುತ್ತೇನೆ ಎಂದರು.
ಕುಟುಂಬ ರಾಜಕಾರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್ ಅವರು, ಕುಟುಂಬ ರಾಜಕಾರಣ ಎಲ್ಲಿ ಇಲ್ಲ ಹೇಳಿ? ಎಲ್ಲಾ ಕಡೆ ಕುಟುಂಬ ರಾಜಕಾರಣವಿದೆ. ಉತ್ತಮ ವಿಚಾರ ಇಟ್ಟುಕೊಂಡು, ಜನರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಯಾರೇ ಇರಬಹುದು ಅವರಿಗೆ ಅವಕಾಶ ಕೊಡಬೇಕು. ಇದನ್ನು ನಾನು ಸ್ವಾಗತ ಮಾಡುತ್ತೇನೆ ಉಳಿದವರು ಸ್ವಾಗತ ಮಾಡಬೇಕು ಎಂದು ಹೇಳಿದರು.
ನನ್ನ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಪ್ರಜ್ವಲ್ ಅವರಿಗೆ ಫೋನ್ ಮಾಡಿ ಮಾತನಾಡುತ್ತೇನೆ. ಕಾರ್ಯಕರ್ತರ ಒತ್ತಡಕ್ಕೆ ಅಧ್ಯಕ್ಷನಾಗಿದ್ದೇನೆ ಎಂದು ತಿಳಿಸಿದರು.