ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಅವರ ವಿರುದ್ಧ ಮಾಜಿ ಸಂಸದ್ ವಿಎಸ್ ಉಗ್ರಪ್ಪ ಅವರು ಕಿಡಿಕಾರಿದ್ದು, ಕ್ಷೇತ್ರ ನೈಜ ಸಮಸ್ಯೆಗಳ ಬಗ್ಗೆ ಗಮನ ಕೊಡಿ ಎಂಬ ಸಲಹೆಯನ್ನು ನೀಡಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಉಗ್ರಪ್ಪ ಅವರು, ಅಲ್ರೀ ಮಿಸ್ಟರ್ ಆನಂದ್ ಸಿಂಗ್, ನಿಮ್ಮ ಕ್ಷೇತ್ರದಲ್ಲಿ 33 ಟಿಎಂಸಿ ಹೂಳಿದೆಯಲ್ಲ ಯಾಕೆ ಬಾಯಿ ಬಿಡ್ತಿಲ್ಲ. ಲೋಪ ಎಲ್ಲಿಯಾಗಿದೆ ಎನ್ನೋದು ಗೊತ್ತಿಲ್ಲದೆ ಮಾತನಾಡ್ತೀರಲ್ಲ. ಮೊದಲು ಜಿಲ್ಲೆಯ ತುಂಗಾಭದ್ರಾ ಅಣೆಕಟ್ಟು ಹೂಳು, ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಹೋರಾಟ ಮಾಡಪ್ಪ ಇದಕ್ಕೆಲ್ಲ ಎಕ್ಸಪ್ಲನೇಷನ್ ಕೊಡಿ ಆನಂದ್ ಸಿಂಗ್ ಎಂದರು. ಅಲ್ಲದೇ ಜಿಂದಾಲ್ ವಿಚಾರದಲ್ಲಿ ರಚಿಸಿರುವ ಕಮಿಟಿ ಒಂದು ಹೆಜ್ಜೆ ಮುಂದಿದೆ. ತಾಯಿ ಬಗ್ಗೆ ಯಾರಿಗೆ ನಿಷ್ಟೆ ಇಲ್ಲವೋ, ಪಕ್ಷಕ್ಕೆ ನಿಷ್ಟೆ ಇಲ್ಲವೋ ಅವರೆಲ್ಲ ಒಂದೇ ಎಂದು ಆಕ್ರೋಶವನ್ನ ವ್ಯಕ್ತಪಡಿಸಿದರು.
ಆನಂದ್ ಸಿಂಗ್ ಅವರು ದಾರಿ ತಪ್ಪಿದ ಮಗ ಆಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಅವರು ದಾರಿ ತಪ್ಪಿದ್ದರು. ಆದರೆ ಪಕ್ಷದ ಹಿನ್ನೆಲೆಯಲ್ಲಿ ಅವರು 5 ವರ್ಷ ಶಾಸಕರಾಗಿ ಆಯ್ಕೆ ಬಂದಿದ್ದಾರೆ. ಆದ್ದರಿಂದ ಅವರು ಕೂಡಲೇ ಪಕ್ಷಕ್ಕೆ ವಾಪಸ್ ಬರಬೇಕು. ಪಕ್ಷಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕ್ಷಮೆ ಕೋರಬೇಕು ಆಗ್ರಹಿಸಿದರು.
ಪರೋಕ್ಷ ವಾಗ್ದಾಳಿ: ವಾಲ್ಮೀಕಿ ಸಮಾಜದ ಜನರು ನಂಬಿಕೆಗೆ ಹೆಸರಾದವರು. ಆದರೆ ಕೆಲವರು ವಾಲ್ಮೀಕಿ ಸಮಾಜದಿಂದ ಬಂದು ಬ್ಲಾಕ್‍ಮೇಲ್ ಮಾಡುತ್ತಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಹೆಸರು ಉಲ್ಲೇಖಿಸದೇ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ಕುಲದ ಹೆಸರೇಳಿಕೊಂಡು ಜನಾದೇಶ ಇರುವ ಸರ್ಕಾರ ಉರುಳಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದೆಯಾ? ವಾಲ್ಮೀಕಿ ಸಮಾಜದವರು ಇದನ್ನ ಖಂಡಿಸುತ್ತಾರೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉಗ್ರಪ್ಪ ಅವರು, ದೇಶದ ಹಾಗೂ ರಾಷ್ಟ್ರದ ವಿಚಾರದಲ್ಲಿ ಬಿಜೆಪಿ ನಿರ್ಲಕ್ಷ್ಯ ವಹಿಸಿದೆ. ದೇಶದ ಎಲ್ಲಾ ಕಡೆ ನೀರಿನ ಸಮಸ್ಯೆ ಇದ್ದು, ನದಿಗಳ ಜೋಡಣೆ ಬಹುಬೇಗ ಆಗಬೇಕಿದೆ ಎಂದರು. ಅಲ್ಲದೇ ಕಳೆದ 5 ವರ್ಷಗಳ ಆಡಳಿತ ಅವಧಿಯಲ್ಲಿ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.