ಬೆಂಗಳೂರು: ಬಳ್ಳಾರಿ ಲೋಕಸಭೆ ಉಪ ಚುನಾವಣೆಯ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪನವರನ್ನು ಕಾಗ್ರೆಸ್ ಆಯ್ಕೆ ಮಾಡಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಲವು ಗೊಂದಲಗಳು ಏರ್ಪಟ್ಟಿದ್ದರೂ, ಕೊನೆಯದಾಗಿ ಉಗ್ರಪ್ಪನ ಹೆಸರನ್ನು ಅಂತಿಮಗೊಳಿಸಲಾಗಿದೆ.
ಈ ಮೊದಲು ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಆದರೆ ನಾಗೇಂದ್ರ ಸಹೋದರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಜಿಲ್ಲಾ ಕಾಂಗ್ರೆಸ್ ಮುಖಂಡರ ನಡುವೆ ಬಂಡಾಯ ಉಂಟಾಗುವ ಸಾಧ್ಯತೆಯಿತ್ತು. ಹೀಗಾಗಿ ಕಾಂಗ್ರೆಸ್ ಅಂತಿಮವಾಗಿ ವಿ.ಎಸ್.ಉಗ್ರಪ್ಪನ ಹೆಸರನ್ನು ಫೈನಲ್ ಮಾಡಿದೆ.
ಉಗ್ರಪ್ಪ ಆಯ್ಕೆ ಏಕೆ?
ಬಳ್ಳಾರಿ ಜಿಲ್ಲೆಗೆ ಸಂಬಂಧಪಟ್ಟವರನ್ನೆ ಕಣಕ್ಕಿಳಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುವುದು ಕೈ ನಾಯಕರಿಗೆ ಗೊತ್ತೊದೆ. ಅಲ್ಲದೇ ಸ್ಥಳೀಯ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಜಿಲ್ಲಾ ಮುಖಂಡರು ಹಾಗೂ ಶಾಸಕರಲ್ಲಿ ಗೊಂದಲ ಏರ್ಪಟಿದೆ. ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದರೆ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ತೀವ್ರ ಬಂಡಾಯ ಉಂಟಾಗುವ ಸಾಧ್ಯತೆ ಇದೆ. ಉಗ್ರಪ್ಪನವರು ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರು. ಈ ಹಿಂದೆ ರೆಡ್ಡಿ ಸಹೋದರರ ವಿರುದ್ಧ ತೊಡೆ ತಟ್ಟಿ, ಹೋರಾಟವನ್ನು ಸಹ ಮಾಡಿದ್ದರು. ಉಗ್ರಪ್ಪನವರು ಜಿಲ್ಲೆಯ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದಲ್ಲದೇ ಹಂಪಿ ವಿಶ್ವವಿದ್ಯಾನಿಲಯದಲ್ಲಿ ವಾಲ್ಮೀಕಿ ಪೀಠ ಸ್ಥಾಪನೆಯಲ್ಲಿ ಉಗ್ರಪ್ಪನವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಅವರನ್ನು ಆಯ್ಕೆ ಮಾಡಿದೆ.
ಉಗ್ರಪ್ಪನವರ ಆಯ್ಕೆಯನ್ನು ಎಲ್ಲಾ ಶಾಸಕರೂ ಹಾಗೂ ಜಿಲ್ಲಾ ಮುಖಂಡರು ಒಪ್ಪುತ್ತಾರೆ. ನಾಗೇಂದ್ರ ಕೂಡ ಅನಿವಾರ್ಯವಾಗಿ ಉಗ್ರಪ್ಪನವರ ಪರ ಪ್ರಚಾರ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಉಗ್ರಪ್ಪನವರು ಬಳ್ಳಾರಿ ಜಿಲ್ಲೆಯ ಯಾವೊಬ್ಬ ಕೈ ಮುಖಂಡರ ಜೊತೆಗೂ ಗುರುತಿಸಿಕೊಂಡಿಲ್ಲ. ಜಿಲ್ಲಾ ಕಾಂಗ್ರೆಸ್ಸಿನ ಮಟ್ಟಿಗೆ ಉಗ್ರಪ್ಪನವರ ಅಜಾತಶತ್ರು. ಹೀಗಾಗಿ ಎಲ್ಲಾ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಉಪ ಚುನಾವಣೆ ಎದುರಿಸಬಹುದು ಎನ್ನುವ ಕಾರಣಕ್ಕೆ ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದೆ.
ಶ್ರೀರಾಮುಲು ಶಾಸಕರಾಗಿ ಆಯ್ಕೆಯಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು 6 ರಂದು ಫಲಿತಾಂಶ ಪ್ರಕಟವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv