ಬೆಂಗಳೂರು: ಸಿಲಿಕಾನ್ ಸಿಟಿಯ ಕೊಳಚೆ ನೀರು ಸೇರಿ ವೃಷಭಾವತಿ ನದಿ ಈಗಾಗಲೇ ಕೊಳಚೆ ಗುಂಡಿ ರೀತಿ ಆಗಿ ಹೋಗಿದೆ. ಇನ್ನು ನದಿ ಜಾಗವನ್ನ ಸುತ್ತಲಿನ ಹಲವು ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿದೆ ಎನ್ನುವ ಆರೋಪವೂ ಇದೆ. ಈ ಮಾಲಿನ್ಯ ಮಧ್ಯೆ ವೃಷಭಾವತಿ ನದಿ ದಡದಲ್ಲಿ ಪ್ಲಾಸ್ಟಿಕ್ ಸುಡುವ ಕೆಲಸ ಕೂಡ ಇತ್ತೀಚೆಗೆ ಹೆಚ್ಚಾಗಿದೆ.
ಕತ್ತಲಾಗುತ್ತಲೇ ವೇಸ್ಟ್ ಪ್ಲಾಸ್ಟಿಕ್ ತಂದು ನದಿ ದಡದಲ್ಲಿ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಅದರಿಂದ ಬರುವ ವಿಷಪೂರಿತ ಹೊಗೆಯಿಂದ ವೃಷಭಾವತಿಯ ಅಸುಪಾಸಿನ ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ತರೇಹವರಿ ಪ್ಲಾಸ್ಟಿಕ್ ಸುಡುವುದರ ಜೊತೆಗೆ ಬಾಯ್ಲರ್ ಗಳಿಂದ ಹೊರಬರುವ ಕೆಮಿಕಲ್ ಮಿಶ್ರಿತ ನೀರನ್ನ ಕೂಡ ವೃಷಭಾವತಿ ನದಿಗೆ ಬಿಡಲಾಗುತ್ತಿದೆ. ಈ ಕೆಮಿಕಲ್‍ಗಳು ನದಿ ನೀರು ಸೇರುತ್ತಿರುವುದರಿಂದ ಪ್ಲಾಸ್ಟಿಕ್, ಕೆಮಿಕಲ್ ಸೇರಿ ಹೊಗೆ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರಿಗೆ ಉಸಿರಾಡಲು ಕೂಡ ಕಷ್ಟವಾಗುತ್ತಿದೆ.
Advertisement
Advertisement
ಗ್ರಾಮ ಪಂಚಾಯ್ತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿ, ನಮಗೆ ಈ ಕೆಮಿಕಲ್ ಹೊಗೆಯಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಬೆಂಗಳೂರಿನ ಏಕ ಮಾತ್ರ ನದಿಯನ್ನ ಹಾಳು ಮಾಡಿ, ನದಿ ಜಾಗವನ್ನ ಕಬ್ಜ ಮಾಡಿಕೊಂಡು, ನದಿ ಹಾಗೂ ಅದರ ಸುತ್ತಲಿನ ಪರಿಸರವನ್ನ ಹಾಳು ಮಾಡುತ್ತಿದ್ದಾರೆ. ಇನ್ನೊಂದೆಡೆ ನದಿ ಆಸುಪಾಸಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.
Advertisement
Advertisement
ಅಷ್ಟೇ ಅಲ್ಲದೆ ಪರಿಸರಕ್ಕೆ ಮಾರಕವಾಗಿರುವ ಈ ಕೆಮಿಕಲ್ ಹಾಗೂ ಪ್ಲಾಸ್ಟಿಕ್ ಸುಡುವುದರ ಹೊಗೆಯಿಂದಾಗಿ ಸುತ್ತಲಿನ ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಿ, ಕೆಮಿಕಲ್, ಪ್ಲಾಸ್ಟಿಕ್ ಸುಡುವ ಕಿಡಿಗೇಡಿಗಳಿಗೆ ಶಿಕ್ಷೆ ನೀಡದೇ ಇದ್ದರೆ, ಈ ಮಾಲಿನ್ಯ ಪರಿಸರವನ್ನು ಅಪೋಷನೆ ತೆಗೆದುಕೊಳ್ಳೊಸಂತು ಸತ್ಯ. ಈಗಲಾದರೂ ಅಧಿಕಾರಿಗಳು ಇತ್ತ ಗಮನ ಕೊಟ್ಟು ವೃಷಭಾವತಿ ನದಿಯನ್ನು, ಅದರ ಜಲಚರಗಳನ್ನು ಹಾಗೂ ಸುತ್ತಮುತ್ತಲು ವಾಸಿಸುವ ಪ್ರಾಣಿ, ಪಕ್ಷಿ, ಜನರ ಜೀವವನ್ನು ರಕ್ಷಿಸಬೇಕಿದೆ.