ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಮೇಲೆ ಇತ್ತೀಚಿನ ದಿನಗಳಲ್ಲಿ ಒಂದೇ ಹೆಸರಿನಲ್ಲಿ ಎರಡು ಚಿತ್ರಗಳು ತೆರೆ ಕಾಣುತ್ತಿರುವುದು ಮೂಲ ಕನ್ನಡದಲ್ಲಿ ಮಾಡಿದ ಸಿನಿಮಾಗಳಿಗೆ ಸಮಸ್ಯೆಯಾಗುತ್ತಿದೆ. ಬೇರೆ ಭಾಷೆಯವರು ರಿಲೀಸ್ ಹಂತದಲ್ಲಿ ಡಬ್ಬಿಂಗ್ ವರ್ಷನ್‌ಗೆ ಟೈಟಲ್ ಕೊಟ್ಟು ಬಿಡುಗಡೆ ಮಾಡುತ್ತಾರೆ. ಅದೇ ರೀತಿ ಯುವ ನಿರ್ದೇಶಕ ಉಮೇಶ್ ಹೆಬ್ಬಾಳ ಅವರು ಕಳೆದ 2-3 ವರ್ಷಗಳಿಂದ ಹೆಚ್ಚಿನ ಶ್ರಮ ಹಾಕಿ, ಕಷ್ಟಪಟ್ಟು ವೃಷಭ (Vrishabha) ಎಂಬ ಚಿತ್ರವನ್ನು ಮಾಡಿದ್ದಾರೆ. ಉಮೇಶ್ ಹೆಬ್ಬಾಳ ಅವರೇ ನಾಯಕನಾಗಿ ನಟಿಸಿ ಬಿಗ್ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ. ವೃಷಭ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿದ್ದು, ಸಧ್ಯದಲ್ಲೇ ರಿಲೀಸ್ ಮಾಡುವ ಯೋಚನೆಯಲ್ಲಿರೋವಾಗಲೇ, ಮೋಹನ್ ಲಾಲ್ ಅಭಿನಯದ, ನಂದಕಿಶೋರ್ ನಿರ್ದೇಶನದ ಮಲಯಾಳಂನ ಪ್ಯಾನ್ ಇಂಡಿಯಾ ಚಿತ್ರ ವೃಷಭ ಕೂಡ ನ.6ಕ್ಕೆ ರಿಲೀಸಾಗುತ್ತಿದೆ. ಕನ್ನಡದಲ್ಲೂ ಸಹ ಅದೇ ಹೆಸರಲ್ಲಿ ತೆರೆ ಕಾಣುತ್ತಿದೆ.
ಈ ಟೈಟಲ್ ವಿವಾದದ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮೇಶ್, ವೃಷಭ ಚಿತ್ರ ನನ್ನ ಬಹುದಿನಗಳ ಕನಸು. ವರ್ಷದ ಹಿಂದೆ ಏಕ್ತಾ ಕಪೂರ್ ಸಂಸ್ಥೆಗೆ ಲೆಟರ್ ಬರೆದಾಗ ಟೈಟಲ್ ಕೊಡ್ತೀರಾ ಎಂದು ಕೇಳಿದ್ದರು. ಆನಂತರ ನಮ್ಮ ಸಂಪರ್ಕಕ್ಕೆ ಬರಲಿಲ್ಲ. ನಾವು ಕೆ.ಮಂಜು ಅವರ ಮೂಲಕ ನಂದಕಿಶೋರ್ ಸಂಪರ್ಕಿಸಿ ಕೇಳಿದಾಗ ಅವರು ಕನ್ನಡದಲ್ಲಿ ರಿಲೀಸ್ ಮಾಡುತ್ತಿಲ್ಲ ಎಂದಿದ್ದರು. ಹಾಗಾಗಿ, ಎಲ್ಲಾ ರೆಡಿ ಮಾಡಿಕೊಂಡು ರಿಲೀಸ್‌ಗೆ ಹೋಗಬೇಕೆಂದಾಗ ನಮಗೀಗ ಸಮಸ್ಯೆ ಎದುರಾಗಿದೆ. ಏಕ್ತಾ ಕಪೂರ್ ಅವರ ಸಂಸ್ಥೆ ನಮ್ಮ ಟೈಟಲ್ ಬಳಸಿಕೊಳ್ತಿದೆ. ಅದು ಸ್ಟಾರ್ ಸಿನಿಮಾ. ನ.6ಕ್ಕೆ ರಿಲೀಸಾಗುತ್ತಿದೆ. ಆಮೇಲೆ ನಾವು ಬಂದರೆ ಜನರಿಗೆ ಕನ್ಫ್ಯೂಸ್ ಆಗುತ್ತೆ. ಫಿಲಂ ಚೇಂಬರ್‌ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿ, ರಿನೆವಲ್ ಕೂಡ ಮಾಡಿಸಿದ್ದೇವೆ. ಅವರು ಕನ್ನಡ ಟೈಟಲ್ ರಿಜಿಸ್ಟರ್ ಮಾಡಿಸದೇ ರಿಲೀಸ್ ಮಾಡಲು ಹೊರಟಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಆ ಸಂಸ್ಥೆಯನ್ನು ಸಂಪರ್ಕಿಸಿ ಇತ್ಯರ್ಥ ಪಡಿಸುವ ಪ್ರಯತ್ನದಲ್ಲಿದೆ ಎಂದರು.
ನಂತರ ವೃಷಭ ಬಗ್ಗೆ ಮಾತಾಡುತ್ತ ಗೂಳಿ ಥರದ ವ್ಯಕ್ತಿತ್ವ ಇರೋ ರೈತನೊಬ್ಬನ ಕಥೆ ನಮ್ಮ ಚಿತ್ರದಲ್ಲಿದೆ. ನಾನು ತೋರಿಸ್ತಿರೋ ರೈತನೇ ಬೇರೆ, ಕನ್ನಡ ಶಾಲೆಗಳನ್ನು ಉಳಿಸಲು ಏನು ಪರಿಹಾರವಿದೆ. ಹೀಗೆ ಸಾಕಷ್ಟು ವಿಷಯಗಳನ್ನು ಚಿತ್ರದಲ್ಲಿ ಹೇಳಿದ್ದೇವೆ. ವೃಷಭ ಟೈಟಲ್ ಮೇಲೆ ನಮ್ಮಿಡೀ ಚಿತ್ರ ನಿಂತಿದೆ. ಈಗ ನಂದ ಕಿಶೋರ್ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ರೈತ ಎಂದರೆ ಬರೀ ಹೊಲದಲ್ಲಿ ಕೆಲಸ ಮಾಡುವವನಲ್ಲ. ಆತನನ್ನು ಕೆಣಕಿದರೆ ಸುಮ್ಮನಿರಲ್ಲ. ಆತನಿಗೂ ತಾಕತ್ತಿರುತ್ತೆ ಅಂತ ಹೇಳಲು ಹೊರಟಿದ್ದೇವೆ ಎಂದೂ ಮಾಹಿತಿ ನೀಡಿದರು.
ರಾಯ ಬಡಿಗೇರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಪ್ರಶಾಂತ್ ಸಾಗರ್ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದು, ಪ್ರಣವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಡ್ಯ ಸುತ್ತಮುತ್ತ 38 ದಿನ, ಬೆಂಗಳೂರಲ್ಲಿ ಎಂಟು ದಿನ ಸೇರಿ 46 ದಿನಗಳ ಕಾಲ ವೃಷಭ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.