ಚಿಕ್ಕಬಳ್ಳಾಪುರ: ಮತದಾನದ ಗೌಪ್ಯತೆ ಕಾಪಾಡದ ಬಿಎಸ್‍ಪಿ ಅಭ್ಯರ್ಥಿ ಸಿ.ಎಸ್.ದ್ವಾರಕನಾಥ್ ಅವರು ಮತದಾರ ಮಾಡಿದ ಮತದಾನದ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್‍ಗೆ ಹಾಕಿಕೊಂಡಿದ್ದಾರೆ.
ಪ್ರಜ್ಞಾವಂತರೆಂದು ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕನಾಥ್ ಅವರು ಮತದಾನದ ಗೌಪ್ಯತೆ ಕಾಪಾಡುವುದರ ಬದಲು ಮತದಾರನೋರ್ವ ಮಾಡಿರುವ ಮತದಾನದ ವಿಡಿಯೊವನ್ನು ತಮ್ಮ ವಾಟ್ಸಪ್ ಸ್ಟೇಟಸ್‍ಗೆ ಹಾಕಿಕೊಳ್ಳುವುದರ ಮೂಲಕ ಮತದಾನದ ಗೌಪ್ಯತೆಯ ನಿಯಮವನ್ನು ಉಲ್ಲಂಘನೆ ಮಾಡಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಅನಾಮಿಕ ಮತದಾರನೋರ್ವ ಸಿ.ಎಸ್.ದ್ವಾರಕನಾಥ್ ಅವರಿಗೆ ಮತ ಹಾಕಿರುವ ವಿಡಿಯೋವನ್ನು ತನ್ನ ಮೊಬೈಲ್‍ನಲ್ಲಿ ಅಕ್ರಮವಾಗಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದೇ ವಿಡಿಯೋವನ್ನು ದ್ವಾರಕನಾಥ್ ಹಾಗೂ ಅವರ ಪಿ.ಎ ಚಂದ್ರು ತಮ್ಮ ವಾಟ್ಸಪ್ ಸ್ಟೇಟಸ್‍ನಲ್ಲಿ ಸಹ ಹಾಕಿಕೊಂಡಿದ್ದಾರೆ.
ಮತ್ತೊಂದೆಡೆ ಕೆಲ ಮತದಾರರು ಸಹ ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿ ತಾವು ಮತದಾನ ಮಾಡಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಅವರಿಗೆ ಮತ ಹಾಕಿರುವ ಫೋಟೋಗಳು ವೈರಲ್ ಆಗಿವೆ.