ಉಡುಪಿ: ಜಿಲ್ಲೆಯ ನಾಲ್ಕು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮುಂಜಾನೆಯಿಂದಲೇ ಮತದಾನ ಆರಂಭವಾಗಿದ್ದು, ಹಕ್ಕು ಚಲಾಯಿಸಲು ಮಂಜು-ಮಳೆಯ ನಡುವೆಯೂ ಮತದಾರರು ಸರತಿ ಸಾಲಿನಲ್ಲಿ ನಿಂತ ದೃಶ್ಯ ಬೆಳಗ್ಗೆಯಿಂದಲೇ ಕಂಡುಬಂದಿದೆ.
ನಗರದಲ್ಲಿ ಇನ್ನೂ ಸರಿಯಾಗಿ ಬೆಳಕಾಗದ ವಾತಾವರಣ ಇದ್ದಾಗಲೇ, ಜನ ಆಸಕ್ತಿಯಿಂದ ಮತದಾನ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗಿದ್ದು, ಕಾರ್ಮೋಡ ಆವರಿಸಿರುವ ವಾತಾವರಣವಿದೆ. ಮಂಜಿನ ನಡುವೆಯೂ ಜನ ಮತದಾನ ಮಾಡುತ್ತಿದ್ದಾರೆ.
ನಗರದ ಕಡಿಯಾಳಿ ಶಾಲೆಯಲ್ಲಿ ಮಾಜಿ ಗೃಹ ಸಚಿವ ಡಾ. ವಿ.ಎಸ್ ಆಚಾರ್ಯರ ಕುಟುಂಬ ಮತದಾನದಲ್ಲಿ ಪಾಲ್ಗೊಂಡಿತು. ಆಚಾರ್ಯ ಪುತ್ರ ಡಾ. ಕಿರಣ್ ಕುಟುಂಬ ಸಮೇತರಾಗಿ ಬಂದು ವೋಟ್ ಮಾಡಿದರು. ಈ ನಡುವೆ ತುಂತುರು ಮಳೆ ಆರಂಭವಾದರೂ, ವರ್ಷಧಾರೆಯ ನಡುವೆಯೇ ಜನ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೂಡ ದಂಪತಿ ಸಮೇತ ಬಂದು ಮತದಾನ ಮಾಡಿದ್ದು, ಅಜ್ಜರಕಾಡು ವಾರ್ಡಿನ ಮಹಿಳಾ ಪಿಯು ಕಾಲೇಜಿನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
ನಗರ ಪ್ರದೇಶದಲ್ಲೂ ದಟ್ಟ ಮಂಜಿನ ವಾತಾವರಣ ಕಂಡು ಬಂದಿದ್ದು, ಜಿಲ್ಲೆಯಾದ್ಯಂತ ಚುನಾವಣೆ ಇರುವ ಕಡೆ ರಜೆ ಘೋಷಿಸಿಲಾಗಿದೆ. ಬೆಳಗ್ಗಿನಿಂದಲೇ ಎಲ್ಲಾ ಮತಗಟ್ಟೆಗಳಲ್ಲಿ ಸರತಿ ಸಾಲಿನ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಒಂದೇ ಕಡ ಜನ ಗುಂಪು ಸೇರದಂತೆ ನೋಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv