ಕೊಪ್ಪಳ: ಲೋಕಸಭಾ ಚುನಾವಣೆಯ ಕೊಪ್ಪಳ ಜಿಲ್ಲಾ ರಾಯಭಾರಿಯಾಗಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಸಂಚಾಲಕ ಪ್ರಶಾಂತ್ ನಾಯಕ್, ಫೇಸ್‍ಬುಕ್‍ನಲ್ಲಿ ಪ್ರಾಣೇಶ್ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು, ಎಡ ಪಕ್ಷಗಳ ಮುಖಂಡರಿಂದ ಪ್ರಾಣೇಶ್ ಆಯ್ಕೆಯನ್ನು ಕೈಬಿಡುವಂತೆ ಆಗ್ರಹ ಕೇಳಿಬರುತ್ತಿದೆ.
ಮತದಾನ ಜಾಗೃತಿ ಜಿಲ್ಲೆಯ ಐಕಾನ್ ಆಗಿ ಗಂಗಾವತಿ ಪ್ರಾಣೇಶ್ ಅವರ ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಾಣೇಶ್ ಅವರು ಹಾಸ್ಯ ಕಾರ್ಯಕ್ರಮಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಹಿಂಪಡೆದು, ಕೊಪ್ಪಳ ಗವಿ ಮಠದ ಸ್ವಾಮೀಜಿ ಅವರನ್ನು ನೇಮಕ ಮಾಡಬೇಕು ಎಂದು ಪ್ರಶಾಂತ್ ನಾಯಕ್ ಒತ್ತಾಯಿಸಿದ್ದಾರೆ.
ಗಂಗಾವತಿ ಪ್ರಾಣೇಶ್ ಅವರು ಆರ್‍ಎಸ್‍ಎಸ್ ಸಿದ್ಧಾಂತ ಹಾಗೂ ಮನುವಾದವನ್ನು ಒಪ್ಪಿಕೊಂಡಿರುವ ಕಲಾವಿದ. ಕಲಾವಿದರಿಗೆ ಜಾತಿ, ಧರ್ಮ ಇರುವುದಿಲ್ಲ. ಆದರೆ ಪ್ರಾಣೇಶ್ ಮೂಲಭೂತವಾದಿ. ಅವರನ್ನು ಮತದಾರರ ಜಾಗೃತಿ ಐಕಾನ್ ಆಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಮತದಾರರಿಗೆ ಮಾಡಿದ ದ್ರೋಹ ಎಂದು ಭಾರದ್ವಾಜ್ ಗಂಗಾವತಿ ಕಿಡಿಕಾರಿದ್ದಾರೆ.
ಪ್ರಾಣೇಶ್ ಹೇಳಿದ್ದೇನು?
ಯಾರ ನಗುವುದಿಲ್ಲವೋ ಅವರು ಮುಂದಿನ ದಿನದಲ್ಲಿ ರಾಹುಲ್ ಗಾಂಧಿ ಬಾಡಿಗಾರ್ಡ್ ಆಗುತ್ತಾರೆ. ರಾಹುಲ್ ಗಾಂಧಿ ಏನೇ ಮಾತನಾಡಿದರೂ ನಗುವ ಹಾಗಿಲ್ಲ ಎಂದು ಪ್ರಾಣೇಶ್, ಹಾಸ್ಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಈ ವಿಡಿಯೋವನ್ನು ಪ್ರಶಾಂತ್ ನಾಯಕ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.