ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಸತ್ಯ. ಹೀಗಾಗಿ ಬಿಜೆಪಿ ಮಾಜಿ ಶಾಸಕ ಗುತ್ತೇದಾರ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡುವ ಮೂಲಕ ಮತಗಳ್ಳತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಳಂದ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಅವರ ಮೇಲೆ ಚಾರ್ಜ್ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಕೇಳಿದಾಗ, ಈ ಪ್ರಕರಣದಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಅಕ್ರಮ ನಡೆದಿರುವುದು ಸತ್ಯ. ಗಂಭೀರವಾದ ತನಿಖೆ ನಡೆಸಿ, ಚಾರ್ಜ್ಶೀಟ್ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಮ್ಮ ಶಾಸಕರು ಸದನದಲ್ಲಿ ದನಿ ಎತ್ತಲಿದ್ದಾರೆ. ಇದು ಕೇವಲ ಕರ್ನಾಟಕದ ದನಿಯಲ್ಲ. ಇಡೀ ಭಾರತದ ದನಿ. ಜನರ ಕೃಪೆಯಿಂದ ನಾವು ಇಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂದರು.ಇದನ್ನೂ ಓದಿ: ಮಡಿಕೇರಿಯಲ್ಲಿ ಮಂಡ್ಯದ ಯುವಕನಿಗೆ ಹನಿಟ್ರ್ಯಾಪ್ ಆರೋಪ – ಹೋಂ ಸ್ಟೇಗೆ ಕರೆಸಿಕೊಂಡು ಹಣಕ್ಕೆ ಡಿಮ್ಯಾಂಡ್
ತನಿಖೆ ನಡೆಸಿ, ಕ್ರಮ ತೆಗದುಕೊಂಡಿದ್ದಾರೆ. ಫೋನ್‌ನಲ್ಲಿ ದಾಖಲೆಗಳು ಡಿಲೀಟ್ ಆಗಿವೆ ಎಂದು ಇದೆ. ಇದರ ಬಗ್ಗೆ ವರದಿ ತರಿಸಿಕೊಂಡು ನೋಡಿ ಆನಂತರ ಮಾತನಾಡುತ್ತೇನೆ. ರಾಹುಲ್ ಗಾಂಧಿ ಅವರ ಸಲಹೆಯಂತೆ ಲೀಗಲ್ ಬ್ಯಾಂಕ್ ಅನ್ನು ಪ್ರತಿ ಕ್ಷೇತ್ರದಲ್ಲೂ ಪ್ರಾರಂಭ ಮಾಡಬೇಕು. ಈ ವಿಚಾರದ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮತದಾರರ ಹಕ್ಕಿನ ರಕ್ಷಣೆಗೆ ಹೋರಾಟ ಆರಂಭ:
ಭಾನುವಾರ (ಡಿ.14) ದೆಹಲಿಯಲ್ಲಿ ನಡೆಯಲಿರುವ ಮತಗಳ್ಳತನ ವಿರುದ್ಧದ ಪ್ರತಿಭಟನೆ ಬಗ್ಗೆ ಕೇಳಿದಾಗ, ಮತದಾರರ ಹಕ್ಕಿನ ರಕ್ಷಣೆಗಾಗಿ ಮತಗಳ್ಳತನ ವಿರುದ್ಧದ ಹೋರಾಟ ಆರಂಭಿಸಿದ್ದೇವೆ. ಮತಗಳ್ಳತನ ವಿರುದ್ಧದ ಹೋರಾಟ ನಮ್ಮ ರಾಜ್ಯದಿಂದಲೇ ಆರಂಭವಾಗಿದ್ದು, ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ನಮ್ಮ ರಾಜ್ಯದಲ್ಲಿ ಚಿಲುಮೆ ಸಂಸ್ಥೆ ಮೂಲಕ ಈ ಹಿಂದೆ ಸಾವಿರಾರು ಬಿಎಲ್‌ಓಗಳನ್ನು ನೇಮಕ ಮಾಡಿ ಅಕ್ರಮ ಎಸಗಲಾಗಿತ್ತು. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಬದ್ಧವಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ನಮ್ಮ ರಾಜ್ಯದ ಎಲ್ಲಾ ಮೂಲೆಗಳಿಂದ ಸಾವಿರಾರು ಕಾರ್ಯಕರ್ತರು, ಮುಖಂಡರು ದೆಹಲಿಗೆ ರೈಲು ಹಾಗೂ ಇತರೆ ಸಾರಿಗೆ ವ್ಯವಸ್ಥೆ ಮೂಲಕ ತೆರಳಿದ್ದಾರೆ. ಈ ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸುತ್ತಿದ್ದಾರೆ. ನಾವು ಚುನಾವಣೆ ಸೋತಿರಬಹುದು. ಆದರೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಕೇಸ್ ನೋಟಿಸ್‌ಗೆ ಉತ್ತರ ನೀಡುವೆ:
ದೆಹಲಿ ಪ್ರವಾಸದ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, ನಾನು ಶನಿವಾರ ದೆಹಲಿ ತಲುಪುವುದೇ ತಡವಾಗುತ್ತದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ಬಂದಿದ್ದು, ಅದಕ್ಕೆ ನಾನು ಉತ್ತರ ನೀಡಬೇಕಿದೆ. ಎಲ್ಲಾ ದಾಖಲೆ ತೆಗೆದುಕೊಂಡು ಹೋಗಿ ಅವರಿಗೆ ಉತ್ತರ ನೀಡುತ್ತೇನೆ ಎಂದರು.
ಡ್ರಗ್ ಪೆಡ್ಲರ್ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, ಇದರ ಬಗ್ಗೆ ಆನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ – ಎಂ.ಬಿ ಪಾಟೀಲ್

