ಕಾರವಾರ: ಈ ಬಾರಿಯ ವಿಧಾನಸಭಾ ಚುನಾವಣೆಗೆ (Election) ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿದ್ದರೆ ನೋಟಾ ಮತದಾನ ಮಾಡುವುದಾಗಿ ನೂರಾರು ಮುಸ್ಲಿಂ ಮಹಿಳೆಯರು (Muslim Women) ಎಚ್ಚರಿಕೆ ನೀಡಿ ಭಟ್ಕಳದಲ್ಲಿ ಪ್ರತಿಭಟನೆ (Protest) ನಡೆಸಿದರು.
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೇ ಭಟ್ಕಳ (Bhatkal) ವಿಧಾನಸಭಾ ಕ್ಷೇತ್ರ ಹಲವು ಕಾರಣಗಳಿಗೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಭಟ್ಕಳದಲ್ಲಿ ಮುಸ್ಲಿಂ ಪ್ರಾಧಾನ್ಯತೆ ಹೆಚ್ಚಿರುವುದರಿಂದ ಇಲ್ಲಿನ ತಂಜಿಮ್ ಸಂಘಟನೆ ಚುನಾವಣೆ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಮುಸ್ಲಿಂ ಜನಾಂಗದವರು ಬದ್ಧರಾಗಿರುತ್ತಾರೆ. ಆದರೆ ಈ ಬಾರಿ ತಂಜಿಮ್ ಸಂಘಟನೆ ಕಳೆದ 2 ದಿನಗಳ ಹಿಂದೆ ಸಭೆ ಸೇರಿ ಬರುವ ವಿಧಾನಸಭಾ ಚುನಾವಣೆಗೆ ಯಾವುದೇ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ತೀರ್ಮಾನ ಮಾಡಿದ್ದು, ಇದೀಗ ಭಟ್ಕಳದ ಯೂತ್ ಗರ್ಲ್ ವಿಂಗ್ ಈ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆ ಕಣಕ್ಕೆ ಇಳಿಸುವಂತೆ ಒತ್ತಾಯಿಸಿ ತಂಜಿಮ್ ಕಚೇರಿ ಮುಂದೆ ನೂರಾರು ಮುಸ್ಲಿಂ ಮಹಿಳೆಯರು ಗೆರಾವ್ ಹಾಕಿ ಪ್ರತಿಭಟನೆ ನಡೆಸಿದರು.
Advertisement
Advertisement
ಹಿಜಬ್ NRC ವಿರುದ್ಧ ಧ್ವನಿ ಎತ್ತದ ತಂಜಿಮ್ ಸಂಘಟನೆ: ಈ ಹಿಂದೆ ಕೇಂದ್ರ ಸರ್ಕಾರದ ಎನ್‌ಆರ್‌ಸಿ, ಹಾಗೂ ಸ್ಥಳೀಯವಾಗಿ ವಿವಾದಕ್ಕೆ ಕಾರಣವಾದ ಹಿಜಬ್ (Hijab) ಪ್ರಕರಣದ ವಿರುದ್ಧ ತಂಜಿಮ್ ಸಂಘಟನೆ ಧ್ವನಿ ಎತ್ತಲಿಲ್ಲ. ಮುಸ್ಲಿಂ ಮಹಿಳೆಯರ ಪರ ಕೂಡ ಬರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಹೀಗೆ ಮುಸ್ಲಿಂ ಅಭ್ಯರ್ಥಿ ಹಾಕುವುದು ಬೇಡ ಎಂದು ತೀರ್ಮಾನಿಸಿದ್ದು ಸರಿಯಲ್ಲ. ಈ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಭಟ್ಕಳದಿಂದ ನಿಲ್ಲಿಸಬೇಕು ಎಂದು ಯೂತ್ ಗರ್ಲ್ ವಿಂಗ್‌ನ ಸದಸ್ಯೆ ಆಯಿಸಾ ತುರ್ಫಾ ಆಜಾಯಿಬ್ ಒತ್ತಾಯ ಮಾಡಿದ್ದು ತಂಜಿಮ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಪತ್ನಿಗೆ ಸೊಳ್ಳೆ ಕಚ್ಚಿದ್ದಕ್ಕೆ ಪೊಲೀಸರ ಸಹಾಯ ಕೇಳಿದ ವ್ಯಕ್ತಿ
Advertisement
ಮುಸ್ಲಿಂ ಅಭ್ಯರ್ಥಿ ನಿಲ್ಲಿಸದಂತೆ ತಂಜಿಮ್ ನಿರ್ಧಾರ ಮಾಡಿದ್ದೇಕೆ?: ಭಟ್ಕಳದಲ್ಲಿ ಮುಸ್ಲಿಂ ಮತ್ತು ನಾಮಧಾರಿ ನಾಯಕರ ಮತಗಳೇ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸುತ್ತಾ ಬಂದಿದೆ. ಯಾರ ಪರ ಮತ ಹಾಕಬೇಕು? ಯಾರಿಗೆ ಬೆಂಬಲಿಸಬೇಕು? ಎಂಬ ನಿರ್ಧಾರವನ್ನು ಭಟ್ಕಳದ ಮುಸ್ಲಿಂ ಜನಾಂಗದಲ್ಲಿ ತಂಜಿಮ್ ಸಂಘಟನೆ ನಿರ್ಧಾರ ಮಾಡುತ್ತದೆ. ಹೀಗಾಗಿ ತಂಜಿಮ್ ಸಂಘಟನೆ ಚುನಾವಣೆ ಸಂದರ್ಭದಲ್ಲಿ ಬಹು ಮುಖ್ಯ ಭೂಮಿಕೆ ನಿರ್ವಹಿಸುತ್ತದೆ.
Advertisement
ಸದ್ಯ ಬಿಜೆಪಿಯಿಂದ (BJP) ನಾಮಧಾರಿ ಜನಾಂಗದ ಹಾಲಿ ಶಾಸಕ ಸುನಿಲ್ ನಾಯ್ಕ ಕಣದಲ್ಲಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಿಂದ ಮಂಕಾಳು ವೈದ್ಯ, ಜೆಡಿಎಸ್‌ನಿಂದ ಇನಾಯಿತುಲ್ಲಾ ಶಾಬಂದ್ರಿ ಚುನಾವಣೆ ಸ್ಪರ್ಧಾಕಾಂಕ್ಷಿಯಾಗಿದ್ದರೆ, ಪಿಎಫ್‌ಐ ಸಂಘಟನೆ ಅಭ್ಯರ್ಥಿ ನಿಲ್ಲಿಸುವ ಸೂಚನೆ ಕೊಟ್ಟಿದೆ. ಆದರೇ ಪಿಎಫ್‌ಐ ಹಾಗೂ ಜೆಡಿಎಸ್‌ನಿಂದ ಸ್ಪರ್ಧಾಕಾಂಕ್ಷಿಗಳಾದ ಮುಸ್ಲಿಂ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ನಿಂತರೇ ಮುಸ್ಲಿಂ ಮತಗಳು ವಿಭಜನೆಯಾಗಿ ಬಿಜೆಪಿ ಗೆಲುವು ಕಾಣುವ ಸಾಧ್ಯತೆಗಳಿವೆ. ಹೀಗಾಗಿ ಬಿಜೆಪಿಯನ್ನು ಮಣಿಸುವ ಉದ್ದೇಶದಿಂದ ಭಟ್ಕಳದ ತಂಜಿಮ್ ಸಂಘಟನೆ ತಮ್ಮ ಜನಾಂಗದಿಂದ ಅಭ್ಯರ್ಥಿ ಹಾಕದಂತೆ ತಟಸ್ಥವಾಗಿ ಉಳಿಯಲು ನಿರ್ಧಾರ ಮಾಡಿದೆ.
2018ರ ಚುನಾವಣೆಯಲ್ಲಿ ಕಣದಿಂದ ಹಿಂದೆ ಸರಿದಿದ್ದ ಮುಸ್ಲಿಂ ಅಭ್ಯರ್ಥಿ: 2018ರ ಚುನಾವಣೆಯಲ್ಲಿ ಈಗಿನ ತಂಜಿಮ್ ಅಧ್ಯಕ್ಷರಾಗಿರುವ ಜೆಡಿಎಸ್ ಅಭ್ಯರ್ಥಿ ಇನಾಯಿತುಲ್ಲಾ ಶಾಬಂದ್ರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಅದಕ್ಕೂ ಮೊದಲು 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ 27,435 ಮತಗಳನ್ನು ಗಳಿಸಿದ್ದರು. ಆದರೆ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಬಯಸಿರುವ ತಂಜಿಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿಯವರಿಗೆ ಕಣದಿಂದ ಹಿಂದೆ ಸರಿಯುವಂತೆ ತಂಜಿಮ್ ಸದಸ್ಯರು ಒತ್ತಾಯ ಹೇರಿ ನಿರ್ಣಯ ಕೈಗೊಂಡಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯುವ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಬೇಕು ಎಂಬ ಕೂಗು ಮುಸ್ಲಿಂ ಜನಾಂಗದಲ್ಲಿ ಕೇಳಿಬರುತಿದ್ದು, ಇದೀಗ ತಮ್ಮ ಸಂಘಟನೆ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದೆ. ಇದನ್ನೂ ಓದಿ: ಕ್ಷೇತ್ರದಲ್ಲಿ ಸಿಂಪತಿ ಇದೆ, ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ: ಅಜ್ಜಂಪೀರ್ ಖಾದ್ರಿ