ಚೆನ್ನೈ: ಡಿಎಂಕೆಗೆ ಮತ ಹಾಕಿದರೆ ಬಿಜೆಪಿಗೇ ಮತ ಹಾಕಿದಂತೆ. ಹೀಗಾಗಿ, ಬಿಜೆಪಿ ಜೊತೆ ಯಾವ ಕಾರಣಕ್ಕೂ ಕೈಜೋಡಿಸಲ್ಲ ಎಂದು ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ದಳಪತಿ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಕೊಂಗು ಪ್ರದೇಶದಲ್ಲಿ ಮೊದಲ ಬಾರಿಗೆ ಪ್ರಚಾರ ಆರಂಭಿಸಿದ ಟಿವಿಕೆ ಮುಖ್ಯಸ್ಥ ವಿಜಯ್, 2026 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಮತ ಹಾಕುವುದು ಬಿಜೆಪಿಗೆ ಮತ ಹಾಕಿದಂತೆ ಎಂದು ಹೇಳಿದ್ದಾರೆ. ಕೇಸರಿ ಪಕ್ಷದೊಂದಿಗಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮೈತ್ರಿ ಅವಕಾಶವಾದಿತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
2021ರ ಚುನಾವಣೆ ವೇಳೆ ಡಿಎಂಕೆ ಹಲವಾರು ಭರವಸೆಗಳನ್ನು ನೀಡಿತ್ತು. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತಹ ಭರವಸೆಗಳನ್ನು ಕಾರ್ಯಗತಗೊಳಿಸಿದ್ದಾರೆಯೇ? ಇತ್ತ ಅಮ್ಮನ (ಜಯಲಲಿತಾ) ಹೆಸರು ಜಪಿಸುತ್ತಿದ್ದರೂ, ಅವರ ಆದರ್ಶನಗಳನ್ನು ಎಐಎಡಿಎಂಕೆ ಮರೆತಿದೆ. ಬಿಜೆಪಿ ಜೊತೆ ಸೂಕ್ತವಲ್ಲದ ಮೈತ್ರಿ ಮಾಡಿಕೊಂಡಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ತಮಿಳುನಾಡಿನ ಕಲ್ಯಾಣಕ್ಕಾಗಿ ಇಂತಹ ಮೈತ್ರಿ ಏರ್ಪಟ್ಟಿತ್ತು ಎಂದು ಎಐಎಡಿಎಂಕೆ ಹೇಳಿಕೊಂಡಿದೆ. ಆದರೆ, ಟಿವಿಕೆ ಅಂತಹ ಅವಕಾಶವಾದಿ ರಾಜಕೀಯ ನಿಲುವನ್ನು ತೆಗೆದುಕೊಳ್ಳುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಮಿಳುನಾಡಿಗೆ ಏನು ಮಾಡಿದೆ? ಅದು ತಮಿಳುನಾಡಿಗೆ ನೀಟ್ ವ್ಯಾಪ್ತಿಯಿಂದ ವಿನಾಯಿತಿ ನೀಡಿದೆಯೇ? ಟಿವಿಕೆ ಸಾಮಾನ್ಯ ಜನರ ಧ್ವನಿಯಾಗಿದ್ದರೆ, ಡಿಎಂಕೆ ತಮಿಳುನಾಡನ್ನು ಲೂಟಿ ಮಾಡುತ್ತಿದೆ. 2026 ರ ವಿಧಾನಸಭಾ ಚುನಾವಣಾ ಹೋರಾಟ ಟಿವಿಕೆ ಮತ್ತು ಡಿಎಂಕೆ ನಡುವೆ ಎಂದು ಮಾತನಾಡಿದ್ದಾರೆ.
ಪಶ್ಚಿಮ ಕೊಂಗು ಪ್ರದೇಶದ ಭಾಗವಾಗಿರುವ ನಾಮಕ್ಕಲ್, ದಶಕಗಳಿಂದ ಎಐಎಡಿಎಂಕೆಯ ಭದ್ರಕೋಟೆಯಾಗಿತ್ತು. ಕೊಂಗು ಪ್ರದೇಶದಾದ್ಯಂತ ಬಿಜೆಪಿ ಪ್ರಭಾವ ಹೊಂದಿದೆ.