ಲಕ್ನೋ: ಬಿಜೆಪಿಗೆ ಹಾಕುವ ಪ್ರತಿ ಮತವು ಪಾಕಿಸ್ತಾನಕ್ಕೆ ಅಣು ಬಾಂಬ್ ಹಾಕಿದಂತೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮಿರಾ ಭಯಾಂದರ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳು ನಿರ್ಣಾಯಕವಾಗಿವೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಗಳಾಗಿವೆ. ಹೀಗಾಗಿ ತುಂಬಾ ಮಹತ್ವ ಪಡೆದಿವೆ ಎಂದು ಅವರು ತಿಳಿಸಿದರು.
ಕಮಲದ ಗುಂಡಿಯನ್ನು ಒತ್ತುವುದರಿಂದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ನರೇಂದ್ರ ಮೆಹ್ತಾ ಅವರಿಗೆ ಲಾಭವಾಗಲಿದೆ. ಅಲ್ಲದೆ ಇದರ ಜೊತೆಗೆ ನಿಮ್ಮ ಒಂದೊಂದು ಮತ ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಹಾಕಿದಂತೆ ಎಂದು ಹೇಳಿದರು.
ಈ ಎರಡು ರಾಜ್ಯಗಳ ಚುನಾವಣೆಯನ್ನು ಇಡೀ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏಕೆಂದರೆ ಈ ಎರಡು ಚುನಾವಣೆಗಳು ದೇಶಭಕ್ತಿಯನ್ನು ಸೂಚಿಸುತ್ತವೆ. 370ನೇ ವಿಧಿ ರದ್ದುಗೊಳಿಸಿದ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಆದ್ದರಿಂದ ಅಪಾರ ಪ್ರಾಮುಖ್ಯತೆ ಪಡೆದಿದೆ. ಈ ಚುನಾವಣೆಯ ಫಲಿತಾಂಶ ಜನರ ರಾಷ್ಟ್ರ ಭಕ್ತಿಯನ್ನು ಬಹಿರಂಗಪಡಿಸುತ್ತದೆ ಎಂದರು.
ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಅಕ್ಟೋಬರ್ 21ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.