ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕ `ವೋಟ್ ಚೋರಿ’ (Vote Theft) ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಭಾನುವಾರ (ಡಿ.14) ದೆಹಲಿಯ (Delhi) ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ (Ramaleela Maidan) `ವೋಟ್ ಚೋರ್ ಗಡ್ಡಿ ಛೋಡ್ ಮಹಾ ರ‍್ಯಾಲಿ’ ಆಯೋಜಿಸಿದೆ.
ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿಯಾಗಲಿದ್ದಾರೆ. ರ‍್ಯಾಲಿ ಮಧ್ಯಾಹ್ನ 1:30ಗಂಟೆಯಿಂದ ಆರಂಭವಾಗಿ, ಸಂಜೆಯವರೆಗೆ ನಡೆಯಲಿದೆ. ಈ ಹಿನ್ನೆಲೆ ಕಾರ್ಯಕರ್ತರು ರಾಮಲೀಲಾ ಮೈದಾನಕ್ಕೆ ಆಗಮಿಸುತ್ತಿದ್ದಾರೆ.ಇದನ್ನೂ ಓದಿ: 45 ವರ್ಷಗಳ ಎಲ್‌ಡಿಎಫ್ ಆಡಳಿತ ಅಂತ್ಯ – ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್
ಕರ್ನಾಟಕದಿಂದಲೂ ದೆಹಲಿಗೆ ಕಾರ್ಯಕರ್ತರ ದಂಡು ರ‍್ಯಾಲಿಯಲ್ಲಿ ಭಾಗಿಯಾಗುತ್ತಿದ್ದು, ವಿವಿಧ ರಾಜ್ಯಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದಾರೆ. ಕರ್ನಾಟಕದಿಂದ ಸುಮಾರು ನಾಲ್ಕೈದು ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಪಸ್ಥಿತರಿಲಿದ್ದಾರೆ.
ರಾಜಧಾನಿಯಲ್ಲಿ ಭದ್ರತಾ ಸಿದ್ಧತೆ – ಸಂಚಾರ ದಟ್ಟಣೆ
ಈ ಬೃಹತ್ ಸಮಾವೇಶಕ್ಕಾಗಿ ದೆಹಲಿ ಪೊಲೀಸ್ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಿದ್ದು, ರಾಮಲೀಲಾ ಮೈದಾನ ಸುತ್ತಮುತ್ತಲಿನ ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ದೇಶದೆಲ್ಲೆಡೆಯಿಂದ ರೈಲು, ಬಸ್ ಮತ್ತು ವೈಯಕ್ತಿಕ ವಾಹನಗಳ ಮೂಲಕ ಆಗಮಿಸುತ್ತಿದ್ದು, ರಾಜಧಾನಿಯಲ್ಲಿ ಜನಸಾಗರ ಹರಿದುಬರುವುದು ಖಚಿತ. ಈ ರ‍್ಯಾಲಿ ಕಾಂಗ್ರೆಸ್‌ನ `ವೋಟ್ ಚೋರಿ’ ಅಭಿಯಾನದ ಕೊನೆಯ ಹಂತವಲ್ಲ, ಬದಲಿಗೆ ಭವಿಷ್ಯದ ಚುನಾವಣೆಗಳಲ್ಲಿ ಜನತಂತ್ರವನ್ನು ಉಳಿಸಿಕೊಳ್ಳುವ ದೀರ್ಘಕಾಲೀನ ಹೋರಾಟದ ಆರಂಭವಾಗಿದೆ. ರಾಜಕೀಯ ವಲಯದಲ್ಲಿ ಈ ಕಾರ್ಯಕ್ರಮ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಇದನ್ನು ವ್ಯರ್ಥ ಪ್ರಯತ್ನ ಎಂದು ಖಂಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನ.22ರಂದು ಈ ರ‍್ಯಾಲಿ ಮಾಡುವುದಾಗಿ ಘೋಷಿಸಿದ್ದು, `ವೋಟ್ ಚೋರಿ’ ಇಂದು ನಮ್ಮ ಜನತಂತ್ರಕ್ಕೆ ಎದುರಾಗಿರುವ ಅತಿದೊಡ್ಡ ಅಪಾಯ. ಬಿಜೆಪಿಯ ದೇಶವ್ಯಾಪಿ ವೋಟ್ ಚೋರಿ ವಿರುದ್ಧ ಜನರ ಮತವನ್ನು ರಕ್ಷಿಸುವ ಹೋರಾಟಕ್ಕೆ ಇದು ಮಹತ್ವದ ಹೆಜ್ಜೆ ಎಂದು ಹೇಳಿದ್ದರು. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಲಾಗಿದೆ, ನಕಲಿ ಮತದಾರರನ್ನು ಸೇರ್ಪಡೆ ಮಾಡಿದೆ, ವಿರೋಧ ಪಕ್ಷಗಳ ಪರ ಒಲವು ಹೊಂದಿರುವ ಮತದಾರರ ಹೆಸರುಗಳನ್ನು ಅಳಿಸುವ ಮೂಲಕ ಮತಗಳ್ಳತನ ನಡೆಯುತ್ತಿದೆ. ಚುನಾವಣಾ ಆಯೋಗವು ಸ್ಪಷ್ಟವಾಗಿ ಪಕ್ಷಪಾತ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ನಿಯಮಗಳನ್ನು ಬಿಜೆಪಿಗೆ ಸಹಾಯಕವಾಗಿ ಬದಲಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ – ವಿ. ಸೋಮಣ್ಣ

