ಬೆಂಗಳೂರು: ಒಡಿಶಾ ರೈಲು ಅಪಘಾತದಿಂದ (Odisha Train Crash) ಕೋಲ್ಕತ್ತಾದಲ್ಲಿ (Kolkata) ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ಆಟಗಾರರನ್ನು (Volleyball Players) ಕರೆತರಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಕ್ರೀಡಾಪಟುಗಳು ಧನ್ಯವಾದ ತಿಳಿಸಿದ್ದಾರೆ.
ಕೋಲ್ಕತಾದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡ ತೆರಳಿತ್ತು. ಈ ವೇಳೆ ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಪರಿಣಾಮವಾಗಿ ಮರಳಿ ರಾಜ್ಯಕ್ಕೆ ವಾಪಸ್ ಬರಲು ಪರಿತಪಿಸುತ್ತಿದ್ದ ತಂಡಕ್ಕೆ ರಾಜ್ಯ ಸರ್ಕಾರ ನಿಯೋಜಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಾಯ ಹಸ್ತ ನೀಡಿದ್ದಾರೆ. ಈ ಮೂಲಕ ತಂಡ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ಸಾಗಲು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಪಘಾತದಿಂದ ರೈಲು ಸಂಚಾರ ಸ್ಥಗಿತ- ಹೌರಾದಲ್ಲಿ ಸಿಲುಕಿದ ರಾಜ್ಯದ ವಾಲಿಬಾಲ್ ಆಟಗಾರರಿಗೆ ವಿಶೇಷ ವಿಮಾನ
ತಂಡದ ತರಬೇತುದಾರರು ಸೇರಿದಂತೆ 32 ಸದಸ್ಯರನ್ನೊಳಗೊಂಡ ತಂಡ ತಮ್ಮ ಸಂಕಷ್ಟವನ್ನು ವೀಡಿಯೋ ಮಾಡಿ ಹೇಳಿಕೊಂಡಿದ್ದರು. ಈ ವೀಡಿಯೋ ತಲುಪಿದ ತಕ್ಷಣ ಕಾರ್ಯ ಪ್ರವೃತ್ತರಾದ ಸಚಿವರು ಮತ್ತು ಅಧಿಕಾರಿಗಳ ತಂಡ ಎಲ್ಲರಿಗೂ ಬೆಂಗಳೂರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದೆ. ಅಲ್ಲದೆ ಸೂಕ್ತ ವಸತಿ ಹಾಗೂ ಊಟದ ವ್ಯವಸ್ಥೆ ಒದಗಿಸಿದ್ದಾರೆ.
ಶುಕ್ರವಾರ ರಾತ್ರಿ ಬಾಲಸೋರ್‍ನಲ್ಲಿ ಮೂರು ರೈಲುಗಳು ಕೋಲ್ಕತ್ತಾ-ಚೆನ್ನೈ ಕೋರಮಂಡಲ್ ಎಕ್ಸ್‍ಪ್ರೆಸ್, ಬೆಂಗಳೂರು-ಹೌರಾ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಭೀಕರ ಅಪಘಾತ ನಡೆದಿತ್ತು. ಘಟನೆಯಲ್ಲಿ ಕನಿಷ್ಠ 288 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರೈಲು ಅಪಘಾತದ ಬಳಿಕ ಆ ಮಾರ್ಗದ 58ಕ್ಕೂ ಹೆಚ್ಚು ರೈಲನ್ನು ರದ್ದು ಮಾಡಲಾಗಿದೆ. ಅಲ್ಲದೆ 81 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ