ಐಜಾಲ್: ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೂ, ಇದರ ಮಧ್ಯೆಯೇ ಬ್ರೇಕ್ ತೆಗೆದುಕೊಂಡು ವಾಲಿಬಾಲ್ ಆಟಗಾರ್ತಿಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಿಜೋರಾಂನ ಮ್ಯಾಸ್ಕಾಟ್‍ನಲ್ಲಿ ಈ ಘಟನೆ ನಡೆದಿದ್ದು, ನಿಂಗ್ಲುನ್ ಹಂಘಲ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೂಲವಾಗಿ ಇದನ್ನು ಲಿಂಡಾ ಚಕ್ಚುವಾಕ್ ಎಂಬವರು ಪೋಸ್ಟ್ ಮಾಡಿದ್ದಾರೆ. ಟುಕುಮ್ ಮಾವಿಲಿಬಾಲ್ ತಂಡದ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಅವರು ಈ ವಿಡಿಯೋದಲ್ಲಿ ತನ್ನ ಮಗುವಿಗೆ ಎದೆಹಾಲು ಕುಡಿಸುತ್ತಿದ್ದಾರೆ. ಹಂಘಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಲಾಲ್ವೆಂಟ್ಲುವಾಂಗಿ ಅವರು ವಾಲಿಬಾಲ್ ಆಟವಾಡುತ್ತಿದ್ದರು. ಆಗ ಚಿಕ್ಕ ವಿರಾಮ ತೆಗೆದುಕೊಂಡು ಪ್ಲೇಯರ್ಸ್ ಕ್ಯಾಂಪ್ ಬಳಿ 7 ತಿಂಗಳ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದರು ಎಂದು ಹೊಗಳಿದ್ದಾರೆ.
Advertisement
Advertisement
ಪೋಸ್ಟ್ ನ ಮಾಹಿತಿ ಪ್ರಕಾರ 2019ರ ಮಿಜೋರಾಂ ರಾಜ್ಯ ಮಟ್ಟದ ಆಟಗಳು ಮ್ಯಾಸ್ಕಾಟ್‍ನಲ್ಲಿ ನಡೆಯುತ್ತಿದ್ದವು. ಈ ವೇಳೆ ಲಾಲ್ವೆಂಟ್ಲುವಾಂಗಿ ಅವರು ತಮ್ಮ ಮಗುವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರೋತ್ಸಾಹ ನೀಡಲು ಮೀಜೊರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು ಲಾಲ್ವೆಂಟ್ಲುವಾಂಗಿ ಅವರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು ಎಂದು ಫೇಸ್ಬುಕ್ ಪೋಸ್ಟಿನಲ್ಲಿ ಬರೆಯಲಾಗಿದೆ.
Advertisement
ಈ ಪೋಸ್ಟಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಲ್ವೆಂಟ್ಲುವಾಂಗಿ ಅವರು ಕ್ರೀಡಾಪಟುವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ತಾಯಿಯಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರರು ತಾಯಿ ಎಂದರೆ ತಾಯಿ, ಸದಾ ಮಕ್ಕಳ ಸೇವೆಯಲ್ಲಿಯೇ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.