ಮಾಸ್ಕೋ: ರಷ್ಯಾ-ಉಕ್ರೇನ್ (Russia-Ukraine Conflict) ಸಂಘರ್ಷದಲ್ಲಿ ಕದನ ವಿರಾಮದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಕ್ಕೆ ಟ್ರಂಪ್ ಮತ್ತು ಮೋದಿ ಅವರಿಗೆ ಧನ್ಯವಾದ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕೃತಜ್ಞತೆ ಸಲ್ಲಿಸಿದ್ದಾರೆ.
ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ವಾಷಿಂಗ್ಟನ್‌ನ ಯೋಜನೆಯ ಕುರಿತು ಪುಟಿನ್ ತಮ್ಮ ಮೊದಲ ಹೇಳಿಕೆಯನ್ನು ನೀಡಿದ್ದಾರೆ. ಉಕ್ರೇನ್ ಸಂಘರ್ಷದ ಬಗ್ಗೆ ಗಮನ ಹರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಇತರೆ ರಾಷ್ಟ್ರಗಳ ಮುಖ್ಯಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ; ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ
ಮೊದಲನೆಯದಾಗಿ, ಉಕ್ರೇನ್ ಸಂಘರ್ಷ ಇತ್ಯರ್ಥಕ್ಕೆ ಇಷ್ಟೊಂದು ಗಮನ ನೀಡಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಮ್ಮದೇ ದೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಗಳಿವೆ. ಈ ನಡುವೆಯೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರು, ಭಾರತದ ಪ್ರಧಾನಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಗಣರಾಜ್ಯದ ಅಧ್ಯಕ್ಷರು ನಮ್ಮ ವಿಷಯಕ್ಕೆ ಸಾಕಷ್ಟು ಸಮಯ ನೀಡಿದ್ದಾರೆ. ಅವರಿಗೆ ನಾನು ಆಭಾರಿ. ಏಕೆಂದರೆ, ಇದೆಲ್ಲವೂ ಯುದ್ಧವನ್ನು ನಿಲ್ಲಿಸುವ ಮತ್ತು ಮಾನವ ಸಾವು-ನೋವುಗಳನ್ನು ತಡೆಗಟ್ಟುವ ಉದಾತ್ತ ಯೋಜನೆಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಕಳೆದ ತಿಂಗಳು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ ಎಂದು ಒತ್ತಿ ಹೇಳಿದ್ದರು. ಭಾರತ ತಟಸ್ಥವಾಗಿಲ್ಲ. ಭಾರತ ಶಾಂತಿಯ ಪರವಾಗಿ ನಿಂತಿದೆ. ಇದು ಯುದ್ಧದ ಯುಗವಲ್ಲ ಎಂದು ನಾನು ಈಗಾಗಲೇ ಅಧ್ಯಕ್ಷ ಪುಟಿನ್ ಅವರಿಗೆ ಹೇಳಿದ್ದೇನೆ. ಈ ವಿಚಾರದಲ್ಲಿ ಟ್ರಂಪ್ ನಿಲುವಿಗೆ ನನ್ನ ಬೆಂಬಲ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ರಷ್ಯಾ ಜೊತೆ ಅಮೆರಿಕ ಮಾತುಕತೆಗೆ ಸಿದ್ಧರೆ – ಈಗಾಗಲೇ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್
ಈ ಮಧ್ಯೆ, ಯಾವುದೇ ಷರತ್ತುಗಳಿಲ್ಲದೆ ಕದನ ವಿರಾಮ ಪ್ರಸ್ತಾವನೆಗೆ ರಷ್ಯಾ ಒಪ್ಪಿಗೆ ನೀಡಬೇಕೆಂದು ಅಮೆರಿಕ ಒತ್ತಾಯಿಸಿತ್ತು. ಆದಾಗ್ಯೂ, ಕೆಲವು ಷರತ್ತುಗಳೊಂದಿಗೆ ಕದನ ವಿರಾಮಕ್ಕೆ ಪುಟಿನ್ ಒಪ್ಪಿಗೆ ಸೂಚಿಸಿದ್ದಾರೆ.