CrimeLatestLeading NewsMain PostNational

ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ

ತಿರುವನಂತಪುರಂ: ಇಡೀ ಕೇರಳ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ (22) ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಕೆಯ ಪತಿ ಎಸ್.ಕಿರಣ್ ಕುಮಾರ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.55 ಲಕ್ಷ ರೂ. ದಂಡ ವಿಧಿಸಿದೆ.

ವಿಸ್ಮಯಾಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ 6 ವರ್ಷ ಜೈಲು 2 ಲಕ್ಷ ರೂ. ದಂಡ, ಕ್ರಿಮಿನಲ್ ಬೆದರಿಕೆಯ ಅಪರಾಧಕ್ಕಾಗಿ 2 ವರ್ಷ ಜೈಲು, 50 ಸಾವಿರ ದಂಡ, ವರ್ದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ 6 ವರ್ಷ ಜೈಲು 10 ಲಕ್ಷ ರೂ. ದಂಡ, ವರದಕ್ಷಿಣೆ ಕಿರುಕುಳ ನೀಡಿದ ಅಪರಾಧಕ್ಕಾಗಿ 1 ವರ್ಷ ಜೈಲು ಹಾಗೂ 5 ಸಾವಿರ ದಂಡ ಸೇರಿದಂತೆ ಒಟ್ಟಾರೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ, 10 ವರ್ಷ ಅವರು ಜೈಲು ವಾಸ ಅನುಭವಿಸಬೇಕಾಗುತ್ತದೆ. ಜೊತೆಗೆ 12.55 ಲಕ್ಷ ರೂಪಾಯಿಗಳನ್ನು ವಿಸ್ಮಯಾ ಪೋಷಕರಿಗೆ ಪರಿಹಾರವಾಗಿ ನೀಡಬೇಕಾಗುತ್ತದೆ ಎಂದು ಕೊಲ್ಲಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಏಕೈಕ ಆರೋಪಿಯಾಗಿರುವ ಕಿರಣ್‌ಗೆ ಭಾರತೀಯ ದಂಡ ಸಂಹಿತೆ(IPC)ಯ ಅನ್ವಯ 304B (ವರದಕ್ಷಿಣೆ ಸಾವು), 498 A (ವರದಕ್ಷಿಣೆ ಕಿರುಕುಳ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಈ 3 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ವಿಸ್ಮಯಾ ಸಾವಿಗೂ ಮುನ್ನ ಗಂಡ-ಹೆಂಡತಿ ನಡುವಿನ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದಲ್ಲಿ ಪ್ರಮುಖ ಪುರಾವೆಯಾಗಿ ಸಿಕ್ಕಿದ್ದನ್ನು ಆಧಾರಿಸಿ ತೀರ್ಪು ಪ್ರಕಟಿಸಿದೆ.

ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ ಸಾವಿನ ಪ್ರಕರಣದಲ್ಲಿ ಪತಿಯೇ ತಪ್ಪಿತಸ್ಥ ಎಂದು ಕೊಲ್ಲಂ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎನ್.ಸುಜಿತ್ ಅವರು, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.

ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇರಳ ಪೊಲೀಸರು 500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. 22 ವರ್ಷದ ವಿಸ್ಮಯಾ ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಾಮ ಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಘಟನೆಗೆ ಒಂದು ದಿನ ಮೊದಲೇ ವಿಸ್ಮಯಾ ತನ್ನ ಸಂಬಂಧಿಕರಿಗೆ ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಳು. ಜೊತೆಗೆ ತನ್ನ ದೇಹದ ಮೇಲೆ ಗಾಯಗಳು ಹಾಗೂ ಹೊಡೆದ ಗುರುತುಗಳ ಫೋಟೋಗಳನ್ನು ಕಳುಹಿಸಿದ್ದಳು.

2020ರಲ್ಲಿ ನಡೆದ ವಿವಾಹದ ವೇಳೆ ಕುಮಾರ್‌ಗೆ ವರದಕ್ಷಿಣೆಯಾಗಿ 10 ಲಕ್ಷ ರೂ. ಮೌಲ್ಯದ ಕಾರನ್ನು ನೀಡಿದ್ದಲ್ಲದೆ 100 ಸವರನ್ ಚಿನ್ನ ಹಾಗೂ 1 ಎಕರೆಗೂ ಹೆಚ್ಚು ಭೂಮಿ ನೀಡಲಾಗಿತ್ತು. ಆದರೆ ಕುಮಾರ್‌ಗೆ ಕಾರು ಇಷ್ಟವಾಗದೆ 10 ಲಕ್ಷ ರೂ. ನಗದು ಬೇಕೆಂದು ಬಯಸಿದ್ದ. ಅದು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಆಕೆಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ ಎಂದು ವಿಸ್ಮಯಾಳ ತಂದೆ ಹೇಳಿದ್ದರು. ಈ ಪ್ರಕರಣ ಇಂದು ಅಂತ್ಯಕಂಡಿದ್ದು, ವಿಸ್ಮಯಾಳ ಪತಿಗೆ ಶಿಕ್ಷೆ ವಿಧಿಸಲಾಗಿದೆ.

Leave a Reply

Your email address will not be published.

Back to top button