ಕಲಬುರಗಿ: ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಸಿಬ್ಬಂದಿ ಮತ್ತು ಪಾಲಿಕೆ ಅಧಿಕಾರಿಗಳನ್ನು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಗೆ ಬರೀ ಭೇಟಿ ಕೊಟ್ಟರೆ ಪ್ರಯೋಜನವಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಸ್ವಚ್ಛತಾ ಅಭಿಯಾನ ಕಾಮಗಾರಿಗೆ ತೆರಳಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಂಸದ ಡಾ.ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಕೆಂಡಾಮಂಡಲರಾದರು. ಈ ವೇಳೆ ಶಾಸಕರು, ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಸಂಸದರ ಎದುರೇ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.
ನೀವು ಬರೀ ವಿಸಿಟ್ ಮಾಡಿದ್ರೆ ಪ್ರಯೋಜನವಿಲ್ಲ. ನಿರ್ಲಕ್ಷ್ಯ ತೋರಿದ ಒಂದಿಬ್ಬರು ಅಧಿಕಾರಿ, ಸಿಬ್ಬಂದಿ ಸಂಸ್ಪೆಂಡ್ ಮಾಡಿದರೆ ಮಾತ್ರ ಎಲ್ಲವೂ ಸರಿ ಹೋಗುತ್ತೆ. ಇಲ್ಲ ಅಂದರೆ ನೀವು ಬರೀ ಭೇಟಿ ನೀಡುತ್ತೀರಿ ಎಂದು ಅಧಿಕಾರಿಗಳು ಸಮ್ಮನಾಗುತ್ತಾರೆ ಎಂದು ಸಂಸದರ ಎದುರೇ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಕಾರಿಡಾರ್‌ನಲ್ಲೇ ರೋಗಿಗಳಿಗೆ ಚಿಕಿತ್ಸೆ- ಗದಗ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ
ಇದೇ ವೇಳೆ ದತ್ತಾತ್ರೇಯ ಪಾಟೀಲ್‍ಗೆ ದನಿಗೂಡಿಸಿದ ಜಾಧವ್ ಸಹ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪಾಲಿಕೆ ಎಂಜಿನಿಯರನ್ನೂ ಸಖತ್ ತರಾಟೆಗೆ ತೆಗೆದುಕೊಂಡರು. ನಾವಿಲ್ಲಿ ಕೆಲಸ ಮಾಡಲು ಬಂದ್ರೆ ಮುಖಕ್ಕೆ ಪೌಡರ್ ಹಚ್ಚಿಕೊಳ್ಳಲು ಹೋಗಿದ್ರಾ ಎಂದು ಸ್ಥಳಕ್ಕೆ ತಡವಾಗಿ ಬಂದ ಅಧಿಕಾರಿಗೆ ಮಂಗಳಾರತಿ ಮಾಡಿದ್ದಾರೆ.