ಕಾರವಾರ: ಉತ್ತರಕನ್ನಡ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಜಯಗಳಿಸಿದ್ದಾರೆ. ಆದರೆ ಅಧಿಕೃತವಾಗಿ ಇನ್ನಷ್ಟೇ ಘೋಷಣೆ ಮಾಡಬೇಕಿದೆ.
ಹೌದು. ಮತ ಎಣಿಕೆ ಆರಂಭವಾದಾಗಿನಿಂದಲೂ ಕಾಗೇರಿಯವರು ಮುನ್ನಡೆ ಕಾಯ್ದುಕೊಂಡಿದ್ದರು. ಇದೀಗ ನಿಂಬಾಳ್ಕರ್ (Anjali Nimbalkar) ವಿರುದ್ಧ ಕಾಗೇರಿಯವರು ಗೆದ್ದು ಬೀಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ ಕಾಗೇರಿಯವರು 7,76,968 ಇವಿಎಂ ಮತ, 3,526 ಪೋಸ್ಟಲ್ ಮತ ಸೇರಿ 7,80,494 ಮತಗಳಿಂದ ಜಯಗಳಿಸಿದ್ದಾರೆ. ನಿಂಬಾಳ್ಕರ್ ಅವರು 4,42,622 ಮತಗಳನ್ನು ಪಡೆದುಕೊಳ್ಳುವ ಮೂಲಕ ಸೋಲನುಭವಿಸಿದರು. ಒಟ್ಟಿನಲ್ಲಿ ಕಾಗೇರಿಯವರು 3,37,872 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ತನ್ನದಾಗಿಸಿಕೊಂಡಿದ್ದಾರೆ. 10,139 ನೋಟಾ ಮತಗಳು ದಾಖಲಾಗಿವೆ.
ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಮುಗಿಲು ಮುಟ್ಟಿದೆ. ಕುಮಟಾ ಬಿಜೆಪಿ ಕಚೇರಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ ಘೋಷಣೆಗಳನ್ನು ಕೂಗುವ ಮೂಲಕ ಕಾರ್ಯಕರ್ತರು, ಮುಖಂಡರು ಗೆಲುವನ್ನ ಸಂಭ್ರಮಿಸಿದರು.
ತಮ್ಮ ಗೆಲುವಿನ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾಗೇರಿಯವರು, ನನ್ನ ಗೆಲುವನ್ನು ಕಾರ್ಯಕರ್ತರು ಮತದಾರಿಗೆ ಅರ್ಪಣೆ ಮಾಡುತ್ತೇನೆ. ನನ್ನ ಸೋಲಿಸಬೇಕು ಎಂದು ಪ್ರಯತ್ನಿಸಿದ ವ್ಯಕ್ತಿಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಜಿಲ್ಲೆಯ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಶಾಸಕ ಶಿವರಾಮ್ ಹೆಬ್ಬಾರ್ ಗೆ ಟಾಂಗ್ ನೀಡಿದರು.