8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

Public TV
2 Min Read
Pejawar Shree copy

ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ಕೃಷ್ಣೈಕ್ಯರಾಗಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

pejawar sri copy

ಜನನ ಮತ್ತು ಬಾಲ್ಯ:
ಅಷ್ಟಮಠಗಳಲ್ಲೇ ಹಿರಿಯ ಯತಿಯಾಗಿದ್ದ ಪೇಜಾವರ ಶ್ರೀ 1931 ಏಪ್ರಿಲ್ 27 ರಂದು ಉಡುಪಿಯಿಂದ 120 ಕಿ.ಮೀ ದೂರದಲ್ಲಿರುವ ಪುತ್ತೂರು ತಾಲೂಕಿನ ರಾಮಕುಂಜ ಹಳ್ಳಿಯಲ್ಲಿ ಜನಿಸಿದ್ದರು. ಪೇಜಾವರ ಶ್ರೀ ವಿಶ್ವೇಶತೀರ್ಥರು ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವರ ಮೂಲ ಹೆಸರು ವೆಂಕಟರಮಣ ಆಗಿತ್ತು.

ವೆಂಕಟರಮಣ ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು 7ನೇ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿದ್ದರು. ನಂತರ 8ನೇ ವಯಸ್ಸಲ್ಲೇ ಮುಖ್ಯಪ್ರಾಣ ಸನ್ನಿಧಿಯಲ್ಲಿ ದೀಕ್ಷೆ ಪಡೆದಿದ್ದರು. ಬಳಿಕ ಪೇಜಾವರ ಮಠದ ಪರಂಪರೆಯ 32ನೇಯ ಯತಿಯಾಗಿ ನೇಮಕಗೊಂಡಿದ್ದರು.

Pejawar Shree

ಪೇಜಾವರ ಶ್ರೀ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುತ್ತಿದ್ದರು. ಜೊತೆಗೆ ಇವರು ಗಾಂಧೀಜಿ ವಿಚಾರಧಾರೆಯನ್ನು ಪಾಲಿಸುತ್ತಿದ್ದರು. ದಿನ ಕಳೆದಂತೆ ಪೇಜಾವರ ಶ್ರೀ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ, ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು. ನಂತರ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು.

1951 ಜನವರಿ 18ರಂದು 21ರ ಹರೆಯದಲ್ಲೇ ಮೊದಲ ಪರ್ಯಾಯ ಪೀಠವೇರಿದ್ದ ಪೇಜಾವರ ಶ್ರೀ ಒಟ್ಟು 5 ಬಾರಿ ಪರ್ಯಾಯ ಪೀಠವೇರಿ ಕೃಷ್ಣ ಪೂಜೆ ನಡೆಸಿದ ಎರಡನೇ ಹಿರಿಯ ಯತಿ ಎಂದು ಖ್ಯಾತಿ ಪಡೆದಿದ್ದಾರೆ. ಕೃಷ್ಣನನ್ನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಬಿಟ್ಟರೆ ಪೇಜಾವರ ಶ್ರೀ ವಿಶ್ವೇಶತೀರ್ಥರೇ ಐದು ಬಾರಿ ಪರ್ಯಾಯ ಪೀಠ ಏರಿದ ವಿಶೇಷ ಸಾಧನೆ ಮಾಡಿದ್ದರು.

shree

ದಲಿತರ ಪರ ಹೋರಾಟ
ದಲಿತರ ಪರ ಧ್ವನಿ ಎತ್ತಿ ದಲಿತರ ಅಭಿವೃದ್ಧಿ ಪರ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಇದಲ್ಲದೇ ದಲಿತ ಖೇರಿಗೆ ಭೇಟಿ ನೀಡಿ ವಾಸ್ತವ್ಯ ಮಾಡುತ್ತಿದ್ದರು. ಕೃಷ್ಣ ಮಠದಲ್ಲಿ ಎಡೆ ಹಾಗೂ ಮಡೆ ಸ್ನಾನವನ್ನು ಪೇಜಾವರ ಶ್ರೀ ಅವರೇ ನಿಲ್ಲಿಸಿದ್ದಾರೆ. ಜೊತೆಗೆ ನಕ್ಸಲ್ ಪ್ರದೇಶದಲ್ಲಿ ಹೆಲ್ತ್ ಕ್ಯಾಂಪ್ ಕೂಡ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು.

ಲಿಂಗಾಯುತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಪೇಜಾವರ ಶ್ರೀ ಆಹ್ವಾನಿಸಿದ್ದರು. ಧರ್ಮ ಸಂಸತ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕರೆಕೊಟ್ಟಿದ್ದರು. ಹೀಗಾಗಿ ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀ ಮುಂಚೂಣಿಯಲ್ಲಿದ್ದರು. ಇವರು ಪ್ರಧಾನಿ ಮೋದಿಯವರೊಂದಿಗೆ ಆತ್ಮೀಯತೆ ಹೊಂದಿದ್ದರು. ಪ್ರಧಾನಿ ಮೋದಿ ಮಾತ್ರವಲ್ಲದೇ ಅಡ್ವಾಣಿ, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಅವರಿಗೂ ಆಪ್ತರಾಗಿದ್ದರು. ವಿಶ್ವಹಿಂದೂ ಪರಿಷತ್ ಪ್ರಮುಖರಾಗಿದ್ದ ಪೇಜಾವರ ಶ್ರೀ ರಾಷ್ಟ್ರದ ಸಂತರಲ್ಲಿ ಪ್ರಭಾವಿ ಹಿರಿಯ ಯತಿಯಾಗಿದ್ದರು.

PejawaraSeer00

ಉಡುಪಿಯ ಅಷ್ಟಮಠದಲ್ಲೇ ಹಿರಿಯ ಯತಿಯಾಗಿದ್ದರಿಂದ ಶೀರೂರು ಲಕ್ಷ್ಮೀವರ ತೀರ್ಥ ಸ್ಚಾಮೀಜಿ ಸಾವಿನ ಸಮಯದಲ್ಲಿ ಅಷ್ಟಮಠಕ್ಕೆ ಮಾರ್ಗದರ್ಶಕರಾಗಿದ್ದರು. ದಲಿತರಿಗೆ ಧೀಕ್ಷೆ ನೀಡುತ್ತಿದ್ದರು. ಸದಾ ಯೋಗ ಪೂಜೆಯಲ್ಲಿ ತಲ್ಲಿನರಾಗಿರುತ್ತಿದ್ದರು. ಅಲ್ಲದೇ ವಿರೋಧದ ನಡುವೆಯೂ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ್ದರು. ಇತ್ತೀಚೆಗೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರ ಖುಷಿಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *