Connect with us

Bengaluru City

ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು

Published

on

– ಕೈ ಸರ್ಕಾರದ ವಿರುದ್ಧ ವಿಶ್ವಕರ್ಮ ಸಮುದಾಯದ ನಾಯಕರು ಗರಂ
– ಸೋನಿಯಾಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ: ನಂಜುಂಡಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ವಿಶ್ವಕರ್ಮ ಸಮಾಜ ಸಾಕಷ್ಟು ಶ್ರಮವಹಿಸಿದೆ. ನಾನು ರಾಜಕೀಯವನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ, ಬದಲಾಗಿ ಸಮಾಜ ಸೇವೆಗಾಗಿ ಆರಿಸಿಕೊಂಡಿದ್ದೇನೆ. ಆದ್ರೆ ನಾನು ಸಿಎಂ ನಂಬಿ ಸೋತು ಹೋಗಿದ್ದೇನೆ ಕೆ.ಪಿ ನಂಜುಡಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸ್ವಾಮೀಜಿಯವರು, ಸ್ವಾಮೀಜಿ ಎನ್ನುವುದನ್ನು ಮರೆತು ಚುನಾವಣೆಯಲ್ಲಿ ಮತ ಯಾಚನೆ ಮಾಡಿದ್ದರು. ಅದೆನ್ನೆಲ್ಲ ಸಿಎಂ ಮರೆತು ಬಿಟ್ಟಿದ್ದಾರೆ. ನನ್ನ ಕೈ ಬಿಟ್ಟಿರುವ ಹಿಂದೆ ಅದೇನು ರಾಜಕೀಯ ಅಡಗಿದ್ಯೋ ಗೊತ್ತಿಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಎಂಎಲ್‍ಸಿ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಟಿಕೆಟ್ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಬೇರೆ ಯಾರದ್ದೋ ಹೆಸರ ಬದಲಾಗಿ ಕೊನೆಯ ಕ್ಷಣದಲ್ಲಿ ನನ್ನ ಹೆಸರನ್ನು ಕೈ ಬಿಟ್ಟಿದ್ದಾರೆ. ನನಗೆ ಭಾಷಣ ಮಾಡಲು ಬರುವುದಿಲ್ಲವೆಂದುಕೊಂಡಿದ್ದಾರೆ ಅನ್ನಿಸುತ್ತದೆ. ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷವನ್ನು ಬೆಳೆಸುತ್ತೀರಿ ಎಂದು ಅವರು ಸಿಎಂಗೆ ಸವಾಲು ಹಾಕಿದರು.

ಶೋಷಿತ ವರ್ಗದ ಧ್ವನಿಯಲ್ಲ: ಸಿಎಂ ಸಿದ್ಧರಾಮಯ್ಯ ದೇವರಾಜ್ ಅರಸು ಆಗುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಹಾಗೆ ಅಗಿಲ್ಲ. ಅರಸು ಜೊತೆ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅವರು ಶೋಷಿತ ವರ್ಗದ ಧ್ವನಿಯಲ್ಲ, ಎಲ್ಲವು ಕಾಲ ನಿರ್ಣಯ. ನನ್ನಂತವನಿಗೆ ಈ ರೀತಿ ಆದರೆ ಸಾಮಾನ್ಯ ವ್ಯಕ್ತಿಗಳ ಗತಿ ಏನು ಎಂದು ನಂಜುಂಡಿ ಪ್ರಶ್ನಿಸಿದರು.

224 ಶಾಸಕರಿಗೆ ವಿಶ್ವಕರ್ಮ ಸಮುದಾಯದವರ ಮತ ಬೇಕು, ಆದ್ರೆ ನಾವು ಬೇಡ. ಇಷ್ಟರ ಮಟ್ಟಿಗೆ ಒಂದು ಸಮಾಜವನ್ನು ನಿರ್ಲಕ್ಷ್ಯ ಮಾಡಬಾರದು. ನನಗೆ ಕಾಂಗ್ರೆಸ್ ಪಕ್ಷ ಸೇರೋದೆ ಬೇಡ ಅಂತ ನಮ್ಮ ಸಮಾಜದ ಜನ ಹೇಳಿದ್ದರು. ಆದ್ರೇ ನಾನೇ ಅವರ ಮನವೊಲಿಸಿ ಪಕ್ಷಕ್ಕೆ ಸೇರಲು ಮುಂದಾದರೆ ಇಂದು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ. ಈಗ ಅವರು ಬಿಜೆಪಿಗೆ ಹೋಗು ಅಂದ್ರೆ ಹೋಗುತ್ತೇನೆ, ಜೆಡಿಎಸ್‍ಗೆ ಹೋಗು ಅಂದ್ರೆ ಹೋಗ್ತೀನಿ ಎಂದರು.

ಸೋನಿಯಾ ಚೆನ್ನಾಗಿದ್ದಾರೆ: ಸ್ವತಃ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ಆ ಹಬ್ಬಕ್ಕೆ ಶುಭಾಶಯ ಈ ಹಬ್ಬಕ್ಕೆ ಶುಭಾಶಯ, ಅಂತಾ ಹೇಳಿದ್ದಾರೆ. ದಿಗ್ವಿಜಯ ಸಿಂಗ್ ನಮ್ಮ ಸಮಾಜದ ಸಮಾವೇಶಕ್ಕೆ ಬಂದು ನನ್ನನ್ನು ಗ್ರೇಟ್ ಲೀಡರ್ ಅಂತಾ ಟ್ವೀಟ್ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ಬಗ್ಗೆ ಗೊತ್ತಿದೆ. ಆದ್ರೆ ಸಿದ್ದರಾಮಯ್ಯ ಅವರ ಬಳಿ ನನ್ನ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ನಾನು ಇಲ್ಲಿಯವರೆಗೆ ರಾಜೀನಾಮೆ ನೀಡಿಲ್ಲ, ಇಲ್ಲಿ ರಾಜೀನಾಮೆ ನೀಡುವುದಿಲ್ಲ. ಮುಖ್ಯಮಂತ್ರಿಗಿಂತ ನನ್ನ ಜೊತೆ ಸೋನಿಯಾ ಗಾಂಧಿಯವರು ಚೆನ್ನಾಗಿದ್ದು ಅವರಲ್ಲಿ ರಾಜೀನಾಮೆ ನೀಡಿ, ನನಗಾದ ಅನ್ಯಾಯವನ್ನು ಹೇಳಿಕೊಳ್ಳುತ್ತೇನೆ ಎಂದರು.

‘ಕೈ’ ಸೇರಲ್ಲ: ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದಾರೆ. ಆದ್ರೆ ಸ್ವಾಮಿಜಿಯವರು ಯಾರು ಸ್ಥಾನಮಾನ ನೀಡ್ತಾರೋ ಅವರ ಜೊತೆ ಹೋಗೋಣ ಅಂತಾ ಸಲಹೆ ನೀಡಿದ್ದಾರೆ. ಯಾವ ಪಕ್ಷ ಅಂತಾ ನಿರ್ಧಾರ ಮಾಡಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಆಹ್ವಾನಿಸಿದ್ದಾರೆ. ಮತ್ತೆ ಸೋನಿಯಾ ಮನವೊಲಿಸಿದರೂ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮಾತೇ ಇಲ್ಲ ಎಂದು ನಂಜುಡಿ ತಮ್ಮ ನಿರ್ಧಾರವನ್ನು ತಿಳಿಸಿದರು.

ಕಾಳಹಸ್ತೇಂದ್ರ ಶ್ರೀಗಳು ಮಾತನಾಡಿ, ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಜೊತೆ ನಾವು ಯಾವುದೇ ಕಾರಣಕ್ಕೂ ಕೈ ಜೋಡಿಸಲ್ಲ. ಸಿದ್ದರಾಮಯ್ಯ ಹತ್ತಿರ ನಾವು ಉಪಮುಖ್ಯಮಂತ್ರಿ, ಸಚಿವ ಸ್ಥಾನ ಕೇಳಿಲ್ಲ. ಸಣ್ಣ ಸ್ಥಾನಮಾನ ಕೊಡಲು ಇಷ್ಟೆಲ್ಲ ಹಿಂದೇಟು ಹಾಕ್ತಾರೆ ಅಂದ್ರೆ ನಮ್ಮನ್ನು ಎಷ್ಟು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದು ಗೊತ್ತಾಗುತ್ತದೆ ಎಂದರು.

45 ಲಕ್ಷ ಜನ ಇರುವ ಸಮುದಾಯ ನಮ್ಮದು, ನಮಗೆ ಸಿಎಂ ಮೋಸ ಮಾಡಿದ್ದಾರೆ. ಅವರ ಮೇಲಿನ ನಂಬಿಕೆ ಹೋಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲವನ್ನು ಸಂಪೂರ್ಣ ವಾಪಸ್ ಪಡೆದುಕೊಳ್ಳುತ್ತೇವೆ. ಆದರೆ ನಮಗೆ ಯಾಕೆ ಮೋಸ ಮಾಡಿದ್ದಾರೆ ಎಂದು ಪ್ರಶ್ನಿಸಿ ಶ್ರೀಗಳು ಭಾವುಕರಾದರು.

ಅದ್ಯಾವುದೋ ಸಮಾಜಕ್ಕೆ ಪಕ್ಷದಲ್ಲಿ, ಉನ್ನತ ಸ್ಥಾನ ಕೊಟ್ಟಿದ್ದೀರಿ? ಆದರೆ ವಿಶ್ವ ಕರ್ಮ ಸಮಾಜಕ್ಕೆ ಮಾತ್ರ ಪದೇ ಪದೇ ಮೋಸ ಯಾಕೆ ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ ಅವರು ಇನ್ಯಾವ ಪರಿ ನಿಮಗೆ ಕೆಲಸ ಮಾಡಬೇಕು? ನಂಜುಂಡಿ ಇಷ್ಟೆಲ್ಲ ಪಕ್ಷಕ್ಕೆ ಒದ್ದಾಡಿದ್ದಾರೆ. ಆದರೆ ಅವರಿಗೆ ಬೆಲೆ ಕೊಟ್ಟಿಲ್ಲ. ಇದು ಸಿಎಂ ನಮಗೆ ಮಾಡಿದ ಮೋಸ ಅಷ್ಟೇ ಅಲ್ಲ, ಅವರಿಗೆ ಅವರೇ, ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮಾಡಿದ ಮಹಾಮೋಸ ಎಂದು ವಾಗ್ದಾಳಿ ನಡೆಸಿದರು.

Click to comment

Leave a Reply

Your email address will not be published. Required fields are marked *