– ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕುರಾನ್, ಬೈಬಲ್ ಭೋದನೆ ನಿಲ್ಲಿಸಿ
ಮಂಗಳೂರು: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನದ ವಿಧಿ 29 ಮತ್ತು 30 ಅನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ವಿಶ್ವ ಹಿಂದೂ ಪರಿಷತ್‍ನ ಸಹ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್‍ನ ಅಂತರರಾಷ್ಟ್ರೀಯ ಬೈಠಕ್‍ನಲ್ಲಿ ಭಾಗವಹಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪ್ರಸ್ತುತ ನಡೆಯುತ್ತಿರುವ ವಿಎಚ್‍ಪಿ ವಿಶ್ವಸ್ತ ಮಂಡಳಿ ಸಭೆಯಲ್ಲಿ ಚರ್ಚೆಯಾಗಲಿದೆ. ದೇಶದಲ್ಲಿ ಆರ್ಟಿಕಲ್ 29 ಹಾಗೂ 30ರ ಪ್ರಕಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಅಂತಹ ಸಂಸ್ಥೆಗಳಲ್ಲಿ ಕುರಾನ್ ಹಾಗೂ ಬೈಬಲ್ ಕಲಿಸುವ ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆಯನ್ನು ಸಂಪೂರ್ಣ ಕೈಬಿಟ್ಟು ಎಲ್ಲರಿಗೂ ಒಂದೇ ತರಹದ ಸೌಲಭ್ಯ ಕಲ್ಪಿಸುವ ಏಕರೂಪದ ಕಾನೂನು ಜಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
Advertisement
Advertisement
ಶಿಕ್ಷಣ ಸಂಸ್ಥೆಗಳಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇದರಲ್ಲಿ ಅವಕಾಶಗಳನ್ನು ನೀಡಿದ್ದು ಹೇಗೆ ಎನ್ನುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಆ ಬಳಿಕ ಕೇಂದ್ರ ಸರ್ಕಾರಕ್ಕೆ ಅಹವಾಲು ಸಲ್ಲಿಸಲಾಗುವುದು ಎಂದರು.
Advertisement
ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಸರ್ಕಾರಗಳು ಮೌಲ್ವಿ, ಪಾದ್ರಿಗಳಿಗೆ ಹೆಚ್ಚಿನ ವೇತನ ನೀಡಿದರೆ, ಹಿಂದೂ ದೇವಸ್ಥಾನಗಳ ಅರ್ಚಕರಿಗೆ ತಾರತಮ್ಯ ಎಸಗಲಾಗುತ್ತಿದೆ. ಈ ವಿಚಾರದಲ್ಲೂ ಚರ್ಚೆ ನಡೆಯಲಿದ್ದು, ಅಗತ್ಯ ಬಿದ್ದಲ್ಲಿ ಆಂದೋಲನ ರೂಪಿಸಲಾಗುವುದು ಎಂದು ಹೇಳಿದರು.