ಅಭಿಮಾನಿ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ (Vishnuvardhan) ಸಮಾಧಿ ನೆಲಸಮ ಆಗುತ್ತಿದ್ದಂತೆಯೇ ಭಾರೀ ಆಕ್ರೋಶ ವ್ಯಕ್ತವಾಯಿತು. ನಟ ಸುದೀಪ್ (Sudeep) ಸೇರಿದಂತೆ ಹಲವರು ಸಮಾಧಿ ನೆಲಸಮ ಆದ ಕುರಿತಂತೆ ಆವೇಶ ಭರಿತ ಮಾತುಗಳನ್ನು ಆಡಿದರು. ಸಮಾಧಿಯ ಜಾಗವನ್ನು ದುಡ್ಡು ಕೊಟ್ಟ ಖರೀದಿಸುವ ಮಾತುಗಳನ್ನು ಸುದೀಪ್ ಆಡಿದರು. ಈ ಕುರಿತಂತೆ ಇವತ್ತು ವಿಷ್ಣು ಮನೆಯಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಸುದೀಪ್ ಅವರ ಹೆಸರನ್ನು ತಗೆದುಕೊಳ್ಳದೇ, ಈವರೆಗೂ ಜಾಗ ಖರೀದಿ ಯಾಕೆ ಮಾಡಿಲ್ಲ? ಅಂತ ಅನಿರುದ್ಧ ಪ್ರಶ್ನೆ ಮಾಡಿದರು. ಈ ಮೂಲಕ ಸುದೀಪ್ ಅವರಿಗೆ ಅನಿರುದ್ಧ (Aniruddha) ಟಾಂಗ್ ಕೊಟ್ಟರಾ? ಅನ್ನುವ ಚರ್ಚೆ ಶುರುವಾಗಿದೆ.
ನಟ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆದ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬಂದವು. ಸಮಾಧಿ ನೆಲಸಮ ಆಗಿದ್ದರ ಹಿಂದೆ ಸ್ವತಃ ವಿಷ್ಣುವರ್ಧನ್ ಕುಟುಂಬವೂ ಇದೆ ಅಂತ ಕೆಲವರು ಆರೋಪ ಮಾಡಿದ್ದರು. ಸಮಾಧಿ ಉಳಿಸಿಕೊಳ್ಳಲು ಅಭಿಮಾನಿಗಳು ಮಾಡಿದ ಹೋರಾಟಕ್ಕೆ ವಿಷ್ಣು ಕುಟುಂಬದ ಬೆಂಬಲವಿರಲಿಲ್ಲ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ದೂರ ಉಳಿಯುವುದಕ್ಕಾಗಿಯೇ ವಿಷ್ಣು ಕುಟುಂಬ ಹಣ ಪಡೆದಿದೆ ಅಂತಾನೂ ಆರೋಪ ಹೊರಸಲಾಗಿತ್ತು. ಈ ಎಲ್ಲದರ ಕುರಿತು ಮಾತನಾಡಲು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಅಭಿಮಾನಿಗಳ ಸಭೆ ಕರೆದಿದ್ದರು. ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾತಾಡಿದರು. ವಿಷ್ಣು ಸಮಾಧಿ ಕುರಿತಾದ ಹೋರಾಟಕ್ಕೆ ತಮ್ಮ ಬೆಂಬಲವನ್ನೂ ಅವರು ವ್ಯಕ್ತಪಡಿಸಿದರು.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ (Abhiman Studio) ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿತ್ತು. ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಷ್ಣುವರ್ಧನ್ ಸಮಾಧಿ ಉಳಿವಿಗಾಗಿ ಹೋರಾಟ ಮಾಡುತ್ತಿದ್ದು, ವಿಷ್ಣು ಅಭಿಮಾನಿಗಳು ಅಕ್ಷರಶಃ ಕಣ್ಣೀರಿಟ್ಟಿದ್ದರು. ಜೊತೆಗೆ ವಿಷ್ಣುವರ್ಧನ್ ಕುಟುಂಬದ ಮೇಲೆಯೇ ಹರಿಹಾಯ್ದಿದ್ದರು. ವಿಷ್ಣು ಸಮಾಧಿ ನೆಲಸಮ ಆಗುವ ವಿಚಾರ, ವಿಷ್ಣು ಕುಟುಂಬಕ್ಕೆ ಮೊದಲೇ ಗೊತ್ತಿತ್ತು. ಅವರು ಅದಕ್ಕಾಗಿ ಹಣ ಪಡೆದಿದ್ದರಿಂದ, ಮೌನಕ್ಕೆ ಜಾರಿದ್ದಾರೆ ಅಂತ ಆರೋಪ ಮಾಡಲಾಗಿತ್ತು. ಸಮಾಧಿ ನೆಲಸಮ ಆಗುವುದರ ಹಿಂದೆ ಸ್ವತಃ ವಿಷ್ಣು ಕುಟುಂಬವೇ ಇದೆ ಅನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತು ಅನಿರುದ್ಧ ಇದೀಗ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ
ವಿಷ್ಣುವರ್ಧನ್ ಅವರ ಸಮಾಧಿಯು ನೆಲಸಮ ಆಗಿದ್ದಕ್ಕೆ ವಿಷ್ಣು ಕುಟುಂಬ ಸಂಭ್ರಮಿಸುತ್ತಿದೆ ಅಂತ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು. ಸಮಾಧಿ ಜಾಗಕ್ಕೆ ಕುಟುಂಬದವರು ಕಾಲಿಡದೇ ಇರುವ ಕಾರಣಕ್ಕಾಗಿ, ಕೋರ್ಟ್ನಲ್ಲೂ ತಮ್ಮ ಹೋರಾಟಕ್ಕೆ ಹಿನ್ನೆಡೆ ಆಯಿತು ಅಂತ ಕೆಲ ಅಭಿಮಾನಿಗಳು ಮಾಧ್ಯಮಗಳ ಜೊತೆ ಮಾತಾಡಿದ್ದರು. ಈ ಎಲ್ಲದರ ಕುರಿತು ಅನಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗಿದ್ದು ನಮಗೂ ಅಪಾರ ನೋವನ್ನುಂಟು ಮಾಡಿದೆ. ಸಂಭ್ರಮಿಸುವ ವಿಕೃತ ಮನಸ್ಸು ನಮ್ಮದಲ್ಲ ಅಂತ ಅನಿರುದ್ಧ ತಿರುಗೇಟು ನೀಡಿದ್ದಾರೆ. ಕುಟುಂಬದ ಘನತೆಯನ್ನು ಹಾಳು ಮಾಡಲು ಹೊರಟರೆ, ಕಾನೂನು ಮೂಲಕ ಉತ್ತರ ಕೊಡುತ್ತೇವೆ ಅಂತ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.
ಬೆಂಗಳೂರಿನ ವಿಷ್ಣುವರ್ಧನ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿಮಾನಿಗಳ ಪ್ರಶ್ನೆಗಳನ್ನು ಆಲಿಸಿದ ಅನಿರುದ್ಧ, ಅಭಿಮಾನಿ ಸ್ಟುಡಿಯೋದಲ್ಲಿ ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಕುಟುಂಬದ ಬೆಂಬಲವಿದೆ ಎಂದು ಹೇಳಿದ್ದಾರೆ. ಅಭಿಮಾನ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಉಳಿಯಬೇಕು ಅಂತ ಬಯಸಿದ್ದವರಲ್ಲಿ ನಾನೂ ಒಬ್ಬ. ಈಗಲೂ ಹೋರಾಟ ಮುಂದುವರೆಯುತ್ತದೆ ಅಂದರೆ, ಕಂಡಿತಾ ನಮ್ಮ ಕುಟುಂಬದ ಬೆಂಬಲ ಇದ್ದೇ ಇರುತ್ತದೆ ಅಂತ ಅನಿರುದ್ಧ ಘೋಷಿಸಿದ್ದಾರೆ. ಸಮಾಧಿ ನೆಲಸಮ ಆಗಿದ್ದರ ಹಿಂದೆ ತಾವಾಗಲಿ, ತಮ್ಮ ಕುಟುಂಬವಾಗಲಿ ಇಲ್ಲ ಅನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇದರ ಜೊತೆಗೆ ಅಭಿಮಾನ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕು ಅಂತ ತಾವು ಪಟ್ಟಿರುವ ಕಷ್ಟವನ್ನೂ ವಿವರಿಸಿದ್ದಾರೆ. ಅದು ಫಲ ಕೊಡದೇ ಹೋದಾಗ, ಮೈಸೂರಿಗೆ ಶಿಫ್ಟ್ ಮಾಡಲಾಯಿತು ಅಂದಿದ್ದಾರೆ.
ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲೂ ವಿಷ್ಣುವರ್ಧನ್ ಅವರ ಸಮಾಧಿ ಇರಬೇಕು ಅಂತ ಇದೇ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ಆಗ್ರಹಿಸಿದರು. ಸರಕಾರದ ವಿರುದ್ಧ ಘೋಷಣೆ ಕೂಡ ಕೂಗಿದರು. ತಮಗೆ ನ್ಯಾಯ ಸಿಗಬೇಕು ಅಂತ ಕೆಲವರು ಆಗ್ರಹಿಸಿದರು. ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಅನಿರುದ್ಧ ಸಮಾಧಾನದಿಂದಲೇ ಉತ್ತರಿಸಿದರು. ಇನ್ಮುಂದೆ ತಮ್ಮ ಕುಟುಂಬದ ವಿರುದ್ಧ ಮಾತಾಡಬೇಕಾದರೆ, ಎಚ್ಚರಿಕೆಯಿಂದ ಮಾತಾಡಿ ಅಂತ ಗುಡುಗಿದರು. ತಮ್ಮ ಕುಟುಂಬದ ವಿರುದ್ಧ ಮಾತಾಡುವ ಅಭಿಮಾನಿಗಳ ವಿರುದ್ಧ ದೂರು ನೀಡುವುದಾಗಿಯೂ ಅವರು ಹೇಳಿದ್ದಾರೆ. ಸಮಾಧಿ ನೆಲಸಮ ವಿಚಾರದಲ್ಲಿ ಸ್ಯಾಂಡಲ್ವುಡ್ ಕೂಡ ಆಕ್ರೋಶ ವ್ಯಕ್ತ ಪಡಿಸಿದೆ. ವಿಷ್ಣು ಕುಟುಂಬ ಕೂಡ ಹೋರಾಟಕ್ಕೆ ಜೊತೆಯಾಗುವುದಾಗಿ ತಿಳಿಸಿದೆ. ಸಮಾಧಿಗಾಗಿ ಮತ್ತೊಂದು ಸುತ್ತಿನ ಹೋರಾಟ ನಡೆಯುತ್ತಾ? ಕಾದು ನೋಡಬೇಕು.