ಬೆಂಗಳೂರು: ಕುಟುಂಬದವರ ಅನಿಸಿಕೆಗೂ ಅಭಿಮಾನಿಗಳ ಮಾತಿಗೂ ವ್ಯತ್ಯಾಸವಿರುತ್ತದೆ. ಹೀಗಾಗಿ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ಅವರ ಕುಟುಂಬದವರ ನಿರ್ಧಾರದ ಮೇಲೆ ನಾನು ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಹೇಳಿದ್ದಾರೆ.
ಭಾರತಿ ವಿಷ್ಣುವರ್ಧನ್ ನಿವಾಸಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿ ಮಾತನಾಡಿದ ಅವರು, ವರನಟ ರಾಜ್‍ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕದಂತೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಆದರೆ ಎಲ್ಲಿ, ಹೇಗೆ ಎನ್ನುವ ಕುರಿತು ವೈಯಕ್ತಿಕವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ ಎಂದರು. ಇದನ್ನು ಓದಿ: ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್
ನಾನು ಕೂಡ ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿ. ಅವರ ಸ್ಮಾರಕ ಆದಷ್ಟು ಬೇಗ ನಿರ್ಮಾಣವಾಗಬೇಕು ಎನ್ನುವುದು ನನ್ನ ಉದ್ದೇಶ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಭಾರತಿ ವಿಷ್ಣುವರ್ಧನ್ ಅವರು ನೀಡಿರುವ ಮನವಿ ಪತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿ, ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಜಾಗದ ಮಾಲೀಕ ನಡುವೆ ಜಗಳ ಉಂಟಾಗಿ, ಕಾಮಗಾರಿ ತಡೆಯಲಾಗಿತ್ತು. ಜಾಗದ ಸಮಸ್ಯೆಯನ್ನು ಬಗೆಹರಿಸಿ ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾದರೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ ಕೈ ಮುಗಿದ ಭಾರತೀ ವಿಷ್ಣುವರ್ಧನ್ ಅವರು, ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಮೌನವಾದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv