ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿಶಾಲಕ್ಷಿ ದೇವಿ ಅವರಿಂದ ಆಸ್ತಿಯನ್ನು ಬೇನಾಮಿಯಾಗಿ ಪಡೆದುಕೊಂಡಿದ್ದಾರೆ ಎನ್ನಲಾದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಬಂಧನದಲ್ಲಿರುವ ಡಿಕೆಶಿಯನ್ನು ಬುಧವಾರ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಶಿವಕುಮಾರ್ ಅವರು 44 ಕೋಟಿ ಅಕ್ರಮ ವಹಿವಾಟು ನಡೆಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಾಗಿರುವ ಕಾರಣ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ವಾದ ಸಂದರ್ಭದಲ್ಲಿ ಬೇರೆ ವಿಚಾರದ ಜೊತೆ ಈ ಅಂಶ ಬಲವಾಗಿ ಪ್ರತಿಪಾದನೆಯಾದ ಕಾರಣ ಕೋರ್ಟ್ ಡಿಕೆಶಿಯನ್ನು 9 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತು.
Advertisement
ಡಿಕೆಶಿ ಮತ್ತು ಆಪ್ತರ ನಿವಾಸದ ಮೇಲಿನ ಐಟಿ ದಾಳಿಯ ವೇಳೆ ಈ ಮಹತ್ವದ ದಾಖಲೆಗಳು ಲಭ್ಯವಾಗಿದ್ದು ಅದರಲ್ಲಿ 5 ಕೋಟಿ ಬೇನಾಮಿ ವಹಿವಾಟಿನ ವಿಚಾರ ಪತ್ತೆಯಾಗಿತ್ತು. ದೆಹಲಿ ಫ್ಲ್ಯಾಟ್ ನಲ್ಲಿ ಪತ್ತೆಯಾದ 8.59 ಕೋಟಿ ರೂಪಾಯಿಯ ಮೂಲವನ್ನು ಪತ್ತೆ ಮಾಡುವ ಜೊತೆ ಇಡಿ ಈಗ 44 ಕೋಟಿ ರೂ. ಅಕ್ರಮ ವ್ಯವಹಾರಗಳ ಕುರಿತು ಡಿಕೆ ಶಿವಕುಮಾರ್ ಅವರಲ್ಲಿ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.
Advertisement
Advertisement
ವಿಶಾಲಾಕ್ಷಿದೇವಿ ಯಾರು?
ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ರಿ ಯಾಗಿರುವ ವಿಶಾಲಾಕ್ಷಿದೇವಿ ಶ್ರೀಕಂಠದತ್ತ ಒಡೆಯರ್ ಸಹೋದರಿ ಆಗಿದ್ದಾರೆ. ಬೆಂಗಳೂರು ಅರಮನೆ ಆಸ್ತಿಯ ಒಡೆತನ ಹೊಂದಿದ್ದ ವಿಶಾಲಾಕ್ಷಿ ದೇವಿ ಡಿಕೆ ಶಿವಕುಮಾರ್ ಜೊತೆ ಬೇನಾಮಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಐಟಿ ಮಾಡಿತ್ತು. 2018 ಆಕ್ಟೋಬರ್ ನಲ್ಲಿ ವಿಶಾಲಾಕ್ಷಿ ದೇವಿ ನಿಧನ ಹೊಂದಿದ್ದರು.
Advertisement
ಲಿಂಕ್ ಹೇಗೆ?
ಬೆಂಗಳೂರು ಅರಮನೆ ಆಸ್ತಿಯಲ್ಲಿ ವಿಶಾಲಾಕ್ಷಿ ದೇವಿ ಪಾಲನ್ನು ಹೊಂದಿದ್ದರು. ಈ ಆಸ್ತಿಯನ್ನು ಶಿವಕುಮಾರ್ ಬೇನಾಮಿ ರೂಪದಲ್ಲಿ ಖರೀದಿಸಿದ್ದಾರೆ ಎಂದು ಈ ಹಿಂದೆಯೇ ಆದಾಯ ತೆರಿಗೆ ಇಲಾಖೆ ಹೈಕೋರ್ಟಿಗೆ ಮಾಹಿತಿ ನೀಡಿತ್ತು. ಡಿಕೆ ಶಿವಕುಮಾರ್ ಅವರು ತಮ್ಮ ಸೋದರ ಸಂಬಂಧಿ ಶಶಿಕುಮಾರ್ ಮೂಲಕ ಈ ವ್ಯವಹಾರ ನಡೆಸಿದ್ದು, ವಿಶಾಲಕ್ಷಿ ದೇವಿ ಅವರಿಗೆ 1 ಕೋಟಿ ರೂ. ಹಣವನ್ನು ಚೆಕ್ ಮೂಲಕ ನೀಡಿದ್ದರೆ 4 ಕೋಟಿ ರೂ. ಹಣವನ್ನು ಚಂದ್ರಶೇಖರ್ ಸುಖಪುರಿ ಎಂಬವರ ಮೂಲಕ ನಗದು ರೂಪದಲ್ಲಿ ನೀಡಲಾಗಿದೆ. ಈ ವ್ಯವಹಾರದಲ್ಲಿ ವಿಶಾಲಾಕ್ಷಿ ದೇವಿ ಸಹ ಭಾಗಿಯಾಗಿದ್ದಾರೆ ಎಂದು ಐಟಿ ಆರೋಪಿಸಿತ್ತು.
ಪತ್ತೆಯಾಗಿದ್ದು ಹೇಗೆ?
ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಡಿಕೆಶಿಯ ಸೋದರ ಸಂಬಂಧಿ ಶಶಿಕುಮಾರ್ ನಿವಾಸದ ಮೇಲೂ ದಾಳಿ ನಡೆದಿತ್ತು ಇಲ್ಲಿ ಸಿಕ್ಕಿದ ದಾಖಲೆ ಆಧಾರಿಸಿ ವಿಶಾಲಕ್ಷಿ ದೇವಿ ನಿವಾಸದ ಮೇಲೂ ದಾಳಿ ನಡೆಸಿ ಅವರ ಆಸ್ತಿ ಮುಟ್ಟುಗೋಲು ಹಾಕಿತ್ತು. ದಾಳಿಯ ಬಳಿಕ ವಿಶಾಲಕ್ಷಿ ದೇವಿ ನನಗೂ ಬೇನಾಮಿ ವ್ಯವಹಾರಕ್ಕೂ ಸಂಬಂಧ ಇಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಐಟಿ ಚಂದ್ರಶೇಖರ್ ಮತ್ತು ಶಶಿಕುಮಾರ್ ಈ ಹಣದ ಮೂಲವನ್ನು ಸಾಬೀತು ಪಡಿಸಿಲ್ಲ. ಉದ್ಯಮಿ ಸಚಿನ್ ನಾರಾಯಣ ಅವರು ಈ ಹಣ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮೂಲವನ್ನು ತೋರಿಸುವಲ್ಲಿ ವಿಫಲರಾಗಿದ್ದು, ಡಿಕೆ ಶಿವಕುಮಾರ್ ಅವರೇ ಬೇನಾಮಿಯಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿತ್ತು.
ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು ಹೇಗೆ?
ಡಿಕೆ ಶಿವಕುಮಾರ್ ನಿವಾಸ, ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿಲ್ಲ. ಆದರೆ ಡಿಕೆಶಿಯನ್ನು ಇಡಿ ಬಂಧಿಸಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಡಿ ದಾಳಿ ನಡೆಸದೇ ಇದ್ದರೂ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಪ್ರಕರಣ ದಾಖಲಿಸಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು.
ಡಿಕೆಶಿ ಆಸ್ತಿ ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
ಚರಾಸ್ತಿ
2013- 60.34 ಕೋಟಿ
2019- 101.31 ಕೋಟಿ
5 ವರ್ಷದ ಮ್ಯಾಜಿಕ್- 94.97 ಕೋಟಿ ರೂ. ಜಾಸ್ತಿ
ಕೃಷಿ ಜಮೀನು
2013-1.14 ಕೋಟಿ
2019- 9.04 ಕೋಟಿ
5 ವರ್ಷದ ಮ್ಯಾಜಿಕ್- 7.90 ಕೋಟಿ ಜಾಸ್ತಿ
ವಸತಿ ಕಟ್ಟಡಗಳು
2013-14.02 ಕೋಟಿ
2019-103.29 ಕೋಟಿ
5 ವರ್ಷದ ಮ್ಯಾಜಿಕ್- 89 ಕೋಟಿ ಜಾಸ್ತಿ
ಡಿಕೆಶಿ ಆಸ್ತಿ
ಕೃಷಿಯೇತರ ಜಮೀನು
2013-149.65 ಕೋಟಿ
2019-511.25 ಕೋಟಿ
5 ವರ್ಷದ ಮ್ಯಾಜಿಕ್- 361 ಕೋಟಿ
ವಾಣಿಜ್ಯ ಕಟ್ಟಡಗಳು
2013-26.24 ಕೋಟಿ
2019-37.27 ಕೋಟಿ
5 ವರ್ಷದ ಮ್ಯಾಜಿಕ್- 11 ಕೋಟಿ ಜಾಸ್ತಿ
2013- 251.39
2019- 762.16
5 ವರ್ಷದ ಮ್ಯಾಜಿಕ್- 510.77