ವಿಶಾಖಪಟ್ಟಣ ದುರಂತ – ಏನಿದು ಸ್ಟೈರೀನ್? ಸೋರಿಕೆ ಆಗಿದ್ದು ಹೇಗೆ? ದೇಹ ಸೇರಿದ್ರೆ ಏನಾಗುತ್ತೆ?

Public TV
3 Min Read
india gas leak

ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣದ ಬಹುರಾಷ್ಟ್ರೀಯ ಸಂಸ್ಥೆಯ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದನ್ನೂ ಓದಿ: ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ

ಇಂದು ಮುಂಜಾನೆ ವಿಶಾಖಪಟ್ಟಣಂ ಜಿಲ್ಲೆಯ ಆರ್.ಆರ್.ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದೆ. ಈ ದುರ್ಘಟನೆಯಲ್ಲಿ ಇದುವರೆಗೂ 13 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸುಮಾರು 1,000ಕ್ಕೂ ಅಧಿಕ ಜನ ಈ ವಿಷಾನಿಲ ಗಾಳಿ ಸೇವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿ ಸೋರಿಕೆಯಾದ ಸ್ಟೈರಿನ್ ಎಷ್ಟು ಅಪಾಯಕಾರಿ? ಯಾವುದಕ್ಕೆ ಬಳಕೆ ಮಾಡುತ್ತಾರೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

gas leak a 1

ಏನಿದು ಸ್ಟೈರೀನ್ ಗ್ಯಾಸ್?
ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಿಂದ ಸೋರಿಕೆಯಾದ ಅನಿಲದ ಹೆಸರು ಸ್ಟೈರೀನ್. ಸ್ಟೈರೀನ್ ಪ್ಲಾಸ್ಟಿಕ್ ತಯಾರಿಕೆಗೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದೆ. ಬೆಂಜೀನ್ ರಾಸಾಯನಿಕದಿಂದ ಇದನ್ನು ಪಡೆಯಬಹುದು. C6H5CH=CH2 ಇದರ ರಾಸಾಯನಿಕ ಸೂತ್ರವಾಗಿದೆ.

ಯಾವುದಕ್ಕೆ ಬಳಕೆಯಾಗುತ್ತದೆ?
ಸ್ಟೈರೀನ್ ಪ್ಲಾಸ್ಟಿಕ್ ತಯಾರಿಕೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದ್ದು, ಇದನ್ನು ಪ್ಲಾಸ್ಟಿಕ್ ಮತ್ತು ಆಟಿಕೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಿಂಥೆಟಿಕ್ ರಬ್ಬರ್ ಮತ್ತು ಪಾಲಿಸ್ಟೈರೀನ್ ರಾಳಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತದೆ. ಜಿಡ್ಡಿನಂತಿರುವ ಈ ಅನಿಲಕ್ಕೆ ಬಣ್ಣವಿಲ್ಲ. ಆದ್ರೆ ಇದನ್ನು ಸೇವಿಸಿದವರಿಗೆ ಸಿಹಿ ವಾಸನೆ ಬರುತ್ತದೆ. ಆದರೆ ಇದು ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಈ ರಾಸಾಯನಿಕ ಅನಿಲ ಗಾಳಿಗೆ ಬಂದ್ರೆ ಬಹು ಬೇಗನೇ ಆವಿಯಾಗುತ್ತದೆ.

leak 1

ಅಪಾಯಕಾರಿ ಯಾಕೆ?
ಭಾರೀ ಪ್ರಮಾಣದಲ್ಲಿ ಸ್ಟೈರೀನ್ ಅನಿಲವನ್ನು ಸೇವಿಸಿದರೆ ಕಣ್ಣು, ಮೂಗು ವಿಪರೀತ ಉರಿಯುತ್ತದೆ. ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ತೊಂದರೆಯಾಗುತ್ತದೆ. ಒಂದು ವೇಳೆ ಈ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡಿದರೆ ತಲೆನೋವು, ಸುಸ್ತು, ನಿಶ್ಯಕ್ತಿ, ಕಿವುಡು, ಖಿನ್ನತೆ ನೋವುಗಳು ಕಾಣಿಸಬಹುದು. ಇದರ ಜೊತೆ ಕಿಡ್ನಿ, ಲಿವರ್ ಸಮಸ್ಯೆಯಾಗುತ್ತದೆ. ಭಾರೀ ಪ್ರಮಾಣದಲ್ಲಿ ದೇಹ ಸೇರಿದರೆ ದೀರ್ಘಕಾಲದವರೆಗೆ ನರಮಂಡಲಕ್ಕೆ ಹಾನಿಯಾಗುವ ಸಾಧ್ಯತೆಯಿದೆ.

ವಾತಾವರಣದಲ್ಲಿ ಸ್ಟೈರೀನ್ ಇದೆ:
ಆಮ್ಲಜನಕ ಹೇಗೆ ವಾತಾವರಣದಲ್ಲಿ ಇದೆಯೋ ಅದೇ ರೀತಿಯಾಗಿ ನಮ್ಮ ಸುತ್ತಮುತ್ತಲು ಸ್ಟೈರಿನ್ ಸೇರಿದಂತೆ ಹಲವು ಅನಿಲಗಳು ಇರುತ್ತದೆ. ವಾಹನದ ಎಕ್ಸಾಸ್ಟ್, ಸಿಗರೇಟಿನ ಹೊಗೆಯಲ್ಲೂ ಸ್ಟೈರೀನ್ ಇರುತ್ತದೆ. ಕಟ್ಟಡ ನಿರ್ಮಾಣ ವಸ್ತುಗಳು, ಬಳಕೆದಾರ ವಸ್ತುಗಳಿಂದಲೂ ಬರುತ್ತದೆ. ಇವುಗಳ ಪ್ರಮಾಣ ಕಡಿಮೆ ಇರುವ ಕಾರಣ ದೇಹಕ್ಕೆ ಸೇರಿದರೂ ಅದು ತಿಳಿಯುವುದಿಲ್ಲ. ಪ್ಲಾಸ್ಟಿಕ್ ಕಾರ್ಖಾನೆಗಳಿಂದ ಹೆಚ್ಚಾಗಿ ಸ್ಟೈರೀನ್ ಹೊರ ಬರುತ್ತದೆ.

ಸೋರಿಕೆಯಾಗಿದ್ದು ಹೇಗೆ?
ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿತ್ತು. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಎಲ್‍ಜಿ ಕಂಪನಿ ಹೇಳಿಕೆ ಬಿಡುಗಡೆ ಮಾಡಿ, ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸದ್ಯ ಈಗ ಎಲ್ಲಿಯೂ ಸೋರಿಕೆ ಆಗುತ್ತಿಲ್ಲ ಎಂದು ತಿಳಿಸಿದೆ.

ಪರಿಸ್ಥಿತಿ ಹೇಗಿದೆ?
ಈಗಾಗಲೇ ಎನ್‍ಡಿಆರ್‍ಎಫ್ ತಂಡ ತೊಂದರೆಗೊಳಗಾದ 5 ಗ್ರಾಮಗಳಿಗೆ ಬಂದಿದ್ದು, ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. 5 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕ ಮತ್ತು ವೆಂಟಿಲೇಟರ್ ಗಳು ಮೊದಲೇ ಸಿದ್ಧವಾಗಿರಿಸಿದ್ದ ಕಾರಣ ಹಲವು ಜೀವಗಳು ಉಳಿದಿದೆ. ಗಾಳಿ ಯಾವ ಕಡೆ ಹೆಚ್ಚು ಬೀಸುತ್ತದೋ ಆ ಪ್ರದೇಶಗಳಿಗೆ ಹೆಚ್ಚಿನ ಸಮಸ್ಯೆಯಾಗಿದೆ.

ಎಲ್‍ಜಿ ಪಾಲಿಮರ್ಸ್ ಕಾರ್ಖಾನೆ:
ಹಿಂದೂಸ್ಥಾನ್ ಪಾಲಿಮರ್ಸ್ ಎಂಬ ಹೆಸರಿನೊಂದಿಗೆ 1961ರಲ್ಲಿ ಆರಂಭವಾದ ಈ ಕಾರ್ಖಾನೆಯನ್ನು 1997 ರಲ್ಲಿ ದಕ್ಷಿಣ ಕೊರಿಯಾದ ಎಲ್‍ಜಿ ಸಂಸ್ಥೆ ಖರೀದಿಸಿತ್ತು. ಈ ಹಿನ್ನೆಲೆಯಲ್ಲಿ ಈ ಕಾರ್ಖಾನೆಗೆ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಇದು ಪಾಲಿಸ್ಟೈರೀನ್ ತಯಾರಿಸುವ ಘಟಕವಾಗಿದ್ದು, ಆಟಿಕೆ ಮತ್ತು ವಿವಿಧ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಈ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಬಳಕೆಯಾಗದೇ ಸಂಗ್ರಹಿಸಿಟ್ಟಿದ್ದ ಸುಮಾರು 5 ಸಾವಿರ ಟನ್ ರಾಸಾಯನಿಕದಿಂದ ವಿಷಾನಿಲ ಸೋರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *