ಕಾರವಾರ: ಮೋಹಕ ಜಾಲದಲ್ಲಿ ಬಿದ್ದು ಪಾಕಿಸ್ತಾನಕ್ಕೆ ಭಾರತೀಯ ಯುದ್ಧ ನೌಕೆಗಳ ಚಲನ ವಲನ ಮಾಹಿತಿ ನೀಡುತ್ತಿದ್ದ ಪ್ರಕರಣದ ಸಂಬಂಧ ಮೂವರು ನೌಕಾ ಅಧಿಕಾರಿಗಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಧಿಸಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಆಂಧ್ರಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿರುವ ಈಸ್ಟರ್ನ್ ಕಮಾಂಡ್‍ಗೆ ಸೇರಿದ ರಾಜೇಶ್, ಲೋಕಂಡ್ ಮತ್ತು ನಿರಂಜನ ಎಂಬವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ
ಹನಿಟ್ರ್ಯಾಪ್ ಪ್ರಕರಣದಲ್ಲಿ ಈ ಹಿಂದೆ ನೌಕಾ ನೆಲೆಯ ಎಂಟು ಮಂದಿ ಸೇಲರ್‌ಗಳು ಸಿಕ್ಕಿಬಿದ್ದಿದ್ದರು. ಈ ಪೈಕಿ ಇಬ್ಬರು ಕಾರವಾರದಲ್ಲಿರುವ ನೌಕಾನೆಲೆಗೆ ಸೇರಿದ್ದರು. ಈಗ ಮತ್ತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ) ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಮೋಹಕ ಜಾಲದಲ್ಲಿ ಸಿಲುಕಿಸಿತ್ತು. ಬಳಿಕ ಭಾರತದ ನೌಕಾನೆಲೆ ಹಾಗೂ ಯುದ್ಧ ನೌಕೆಗಳ ಮಾಹಿತಿಯನ್ನು ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿರುವ ತನಿಖಾ ಸಂಸ್ಥೆ ಮೂವರನ್ನು ವಶಕ್ಕೆ ಪಡೆದಿದೆ.
ನೌಕಾದಳದ ಮಾಹಿತಿ ಸೋರಿಕೆ ಹಿನ್ನೆಲೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಆ್ಯಂಡ್ರಾಯ್ಡ್ ಫೋನ್‍ಗಳನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಗುಪ್ತ ಮಾಹಿತಿ ಹಂಚಿಕೆ ಸಂಬಂಧ ತನಿಖೆ ಸಹ ನಡೆಸಲಾಗುತ್ತಿದೆ.