ಅಮೆರಿಕಕ್ಕೆ ಹೋಗಲ್ಲ, ಭಾರತದಲ್ಲೇ ಇರ್ತೀನಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಚೇತನ್

Public TV
2 Min Read
Actor chetan 3

ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣ ನೀಡಿ ನಟ, ಸಾಮಾಜಿಕ ಹೋರಾಟಗಾರ ಚೇತನ್ (Chetan) ಅವರ ವೀಸಾವನ್ನು (Visa) ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿರುವ ಚೇತನ್ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಚೇತನ್, ನಾನು ಹುಟ್ಟಿ, ಓದಿದ್ದು ಅಮೆರಿಕದಲ್ಲಿ (America) ಆದರೂ ಕಾರ್ಯನಿರ್ವಹಿಸಲು ಭಾರತಕ್ಕೆ (India) ಬಂದೆ. ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗೆ 528 ಮನೆಗಳನ್ನು ಕಟ್ಟಿಸಿದ್ದೇನೆ. ನನ್ನ ಸಿದ್ಧಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದು ಈ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

CHETAN 2

ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ ಕೇಸ್ ಹಾಕಿದ್ರು. ಗನ್ ಮ್ಯಾನ್‌ನನ್ನು ಒಂದೂವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಹೇಳಿ 3 ದಿನ ಜೈಲಿಗೆ ಕಳುಹಿಸಿದರು. ಸಾಗರೋತ್ತರ ವೀಸಾ (OCI) ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕುವುದು, ಚುನಾವಣೆಗೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡುವುದು ಬಿಟ್ಟರೆ ಬೇರೆ ಎಲ್ಲಾ ಹಕ್ಕು ನನಗೆ ಇದೆ ಎಂದು ತಿಳಿಸಿದರು.

ಕಳೆದ 10 ತಿಂಗಳ ಹಿಂದೆ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ, ನಿಮ್ಮ ವೀಸಾ ರದ್ದು ಮಾಡಬಹುದು ಎಂಬ ಶೋಕಾಸ್ ನೋಟಿಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲಾ ದಾಖಲೆ ಸಲ್ಲಿಸಿ ಬಂದಿದ್ದೆ. ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತು, ಜೈಲಿಗೆ ಹಾಕುವುದಲ್ಲದೇ ನಾನು ದೇಶದಲ್ಲೂ ಇರಬಾರದು ಎಂದು ವೀಸಾ ರದ್ದು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

chetan 13 1

ನಾನು ವಕೀಲರ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ಧವಾಗಿ ಸ್ಟೇ ತರುತ್ತೇನೆ. ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದು ತಿಳಿಸಿದರು.

ಭಾರತದಲ್ಲಿ 18 ವರ್ಷದಿಂದ ಇದ್ದೇನೆ. ಜಾನಪದ ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರದ ಮೇಲೆ ಸಂಶೋಧನೆ ಅನುದಾನ ತೆಗೆದುಕೊಂಡು ಭಾರತಕ್ಕೆ 2005 ರಲ್ಲಿ ಬಂದೆ. 2015 ರಿಂದ ಪೂರ್ಣಪ್ರಮಾಣದಲ್ಲಿ ಭಾರತದಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೇ ಆಗಿರುವುದರಿಂದ 2018 ರಲ್ಲಿ ನನಗೆ ಒಸಿಐ ಕೊಟ್ಟಿದ್ದಾರೆ. ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಇದೆ. ನಾನು ಕೂಡಾ ತೆರಿಗೆಯನ್ನು ಇದೇ ದೇಶಕ್ಕೆ ಕಟ್ಟುತ್ತೇನೆ. ಆದರೆ ಈ ತಕ್ಷಣವೇ ಒಸಿಐ ರದ್ದು ಮಾಡಲಾಗಿದೆ ಎಂದು ನೋಟಿಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ ಎಂದು ಚೇತನ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

Share This Article